ತಿರುವನಂತಪುರ, ಜ 23( DaijiworldNews/MS): ಪ್ರಧಾನಿ ನರೇಂದ್ರ ಮೋದಿ ಕುರಿತು ಬಿಬಿಸಿ ನಿರ್ಮಿಸಿರುವ 'ಇಂಡಿಯಾ: ದಿ ಮೋದಿ ಕ್ವೆಶ್ಚನ್' ಹೆಸರಿನ 'ವಿವಾದಾತ್ಮಕ' ಸಾಕ್ಷ್ಯಚಿತ್ರವನ್ನುಕೇರಳದಲ್ಲಿ ಪ್ರದರ್ಶಿಸಲಾಗುವುದು ಎಂದು ಕೇರಳದ ಆಡಳಿತಾರೂಢ ಸಿಪಿಐಎಂನ ಯುವ ವಿಭಾಗವಾದ ಡಿವೈಎಫ್ಐ ಮಂಗಳವಾರ ಘೋಷಿಸಿಕೊಂಡಿದೆ.
ಗುಜರಾತ್ ಗಲಭೆ ವಿಚಾರವಾಗಿ ಪ್ರಧಾನಿ ಮೋದಿ ಕುರಿತ ವಿಮರ್ಶಾತ್ಮಕ ಬಿಬಿಸಿ ಸಾಕ್ಷ್ಯಚಿತ್ರ ಕುರಿತ ಟ್ವೀಟ್ಗಳನ್ನು ಕೇಂದ್ರ ಸರ್ಕಾರ ಶನಿವಾರ ನಿರ್ಬಂಧಿಸಿದ್ದು, 2002ರ ಗುಜರಾತ್ ಗಲಭೆ ಮತ್ತು ಪ್ರಧಾನಿ ನರೇಂದ್ರ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರದ ಲಿಂಕ್ಗಳನ್ನು ತೆಗೆದುಹಾಕುವಂತೆ ಟ್ವಿಟರ್ ಮತ್ತು ಯೂಟ್ಯೂಬ್ಗೆ ಆದೇಶಿಸಿದ ಬೆನ್ನಲ್ಲೇ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್ಐ) ತನ್ನ ಫೇಸ್ಬುಕ್ ಪುಟದಲ್ಲಿ ಈ ಪ್ರಕಟಣೆಯನ್ನು ಹೊರಡಿಸಿದೆ.
ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಭಾರತ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸಾಕ್ಷ್ಯಚಿತ್ರವನ್ನು "ಪ್ರಚಾರದ ತುಣುಕು"... ಇದು ವಸ್ತುನಿಷ್ಠತೆಯ ಕೊರತೆ ಮತ್ತು ವಸಾಹತುಶಾಹಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಕಿಡಿಕಾರಿದೆ.
ಸಾಕ್ಷ್ಯಚಿತ್ರಕ್ಕೆ ನಿರ್ಬಂಧ ಹೇರಿದ ಕೇಂದ್ರ ಸರ್ಕಾರದ ಈ ಕ್ರಮಕ್ಕೆ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಟಿಎಂಸಿಯು ತೀವ್ರವಾಗಿ ಟೀಕಿಸಿದೆ