ಬೆಂಗಳೂರು, ಜ 24 (DaijiworldNews/DB): ಲುಡೋ ಗೇಮ್ ಆ್ಯಪ್ ಮೂಲಕ ಪರಿಚಯವಾದ ಪಾಕಿಸ್ತಾನಿ ಯುವತಿಯನ್ನು ಪ್ರೀತಿಸಿ ಅಕ್ರಮವಾಗಿ ಭಾರತಕ್ಕೆ ಕರೆಸಿಕೊಂಡ ಉತ್ತರ ಪ್ರದೇಶ ಮೂಲದ ಯುವಕನೊಬ್ಬ ಪತ್ನಿ ಸಮೇತ ಬೆಂಗಳೂರು ಪೊಲೀಸರ ಬಂಧಿಸಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶ ಮೂಲದ ಮುಲಾಯಂ ಸಿಂಗ್ ಯಾದವ್ (26) ಮತ್ತು ಪಾಕಿಸ್ತಾನ ಮೂಲದ ಇಕ್ರಾಜೀವಾನಿ (19) ಬಂಧಿತರು. ಇನ್ನು ಈ ದಂಪತಿಗೆ ಬಾಡಿಗೆಗೆ ಮನೆ ನೀಡಿದ ಗೋವಿಂದ ರೆಡ್ಡಿ (50) ಎಂಬವರನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಘಟನೆ ಬಗ್ಗೆ ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿಗೆ ಮಾಹಿತಿ ನೀಡಲಾಗಿದ್ದು, ಯುವತಿಯನ್ನು ರಾಜ್ಯ ಮಹಿಳಾ ನಿಲಯಕ್ಕೆ ಕಳುಹಿಸಲಾಗಿದೆ. ಎಚ್ಎಸ್ಆರ್ ಲೇಔಟ್ನ ಖಾಸಗಿ ಕಂಪೆನಿಯೊಂದಲ್ಲಿ ಭದ್ರತಾ ಸಿಬಂದಿಯಾಗಿ ಕೆಲಸ ಮಾಡುತ್ತಿದ್ದ ಮುಲಾಯಂ ಸಿಂಗ್, ಬಿಡುವಿನ ವೇಳೆಯಲ್ಲಿ ಲುಡೋ ಗೇಮಿಂಗ್ ಆಪ್ ಬಳಸುತ್ತಿದ್ದ. ಈ ವೇಳೆ ಪಾಕ್ ಯುವತಿ ಇಕ್ರಾಜೀವಾನಿಯ ಪರಿಚಯವಾಗಿದೆ. ಪರಿಚಯ ಕ್ರಮೇಣ ಪ್ರೀತಿಗೆ ತಿರುಗಿದ್ದು, ಕಳೆದೆರಡು ವರ್ಷದಿಂದ ಇಬ್ಬರೂ ಪ್ರೀತಿಸಿ ಬಳಿಕ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಕಾನೂನಿನ ತೊಡಕು ಪರಿಣಮಿಸುವ ಭಯದಿಂದ ಯುವತಿ ಭಾರತಕ್ಕೆ ಬರಲು ಹಿಂದೇಟು ಹಾಕಿದ್ದರೂ, ಮುಲಾಯಂ ಆಕೆಯನ್ನು ಭಾರತಕ್ಕೆ ಕರೆಸಿಕೊಳ್ಳಲು ದಾರಿ ಹುಡುಕಿದ್ದ.
ಪ್ರವಾಸಿ ವೀಸಾ ಪಡೆಯಲು ಸೂಚಿಸಿ ಆಕೆಯನ್ನು ನೇಪಾಳದ ಕಠ್ಮಂಡುವಿಗೆ ಕರೆಸಿಕೊಂಡು ಅಲ್ಲಿಯೇ ಇಬ್ಬರೂ ವಿವಾಹವಾಗಿದ್ದಾರೆ. ಅಲ್ಲಿಂದ ನೇಪಾಳದ ಗುರುತಿನ ಚೀಟಿ ಪಡೆದು ಬಿಹಾರದ ಬಿರ್ಗಂಜ್ ಮೂಲಕ ಭಾರತಕ್ಕೆ ಬಂದಿದ್ದಾರೆ. ಪಾಟ್ನಾದಿಂದ ರೈಲಿನಲ್ಲಿ ಬೆಂಗಳೂರಿಗೆ ಕಳೆದ ವರ್ಷ ಸೆಪ್ಟಂಬರ್ನಲ್ಲಿ ಆಗಮಿಸಿದ್ದ ದಂಪತಿ ಬಳಿಕ ಸರ್ಜಾಪುರ ರಸ್ತೆಯಲ್ಲಿರುವ ಜನ್ನಸಂದ್ರದಲ್ಲಿ ಬಾಡಿಗೆ ಮನೆ ಪಡೆದು ವಾಸಿಸುತ್ತಿದ್ದರು. ಮುಲಾಯಂ ಕೆಲಸಕ್ಕೆ ಹೋಗುತ್ತಿದ್ದರೆ, ಇಕ್ರಾ ಮನೆಯಲ್ಲೇ ಇರುತ್ತಿದ್ದಳು ಎಂದು ತಿಳಿದು ಬಂದಿದೆ.
ಇನ್ನು ಪತ್ನಿಯ ಹೆಸರನ್ನು ರಾವಾ ಯಾದವ್ ಎಂದು ಬದಲಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿಯನ್ನೂ ಮುಲಾಯಂ ಮಾಡಿಸಿದ್ದ. ಆಕೆಯ ನಕಲಿ ಹೆಸರಿನಲ್ಲಿ ಪಾಸ್ ಪೋರ್ಟ್ಗೂ ಅರ್ಜಿ ಸಲ್ಲಿಸಿದ್ದ ಎಂಬ ಅಂಶ ಬಹಿರಂಗಗೊಂಡಿದೆ.
ತಾಯಿಗೆ ಕರೆ ಮಾಡಿ ಸಿಕ್ಕಿ ಬಿದ್ದಳು
ಇದೀಗ ಇಕ್ರಾ ಜಿವಾನಿ ಪಾಕಿಸ್ತಾನದಲ್ಲಿರುವ ತನ್ನ ತಾಯಿಗೆ ಕರೆ ಮಾಡಿ ಸಿಕ್ಕಿ ಹಾಕಿಕೊಂಡಿದ್ದಾಳೆ. ಬೆಂಗಳೂರಿನಿಂದ ಪಾಕಿಸ್ತಾನಕ್ಕೆ ಕರೆ ಹೋಗಿರುವ ವಿಚಾರವನ್ನು ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿ ರಾಜ್ಯ ಗುಪ್ತಚರ ಮತ್ತು ಆಂತರಿಕ ಭದ್ರತಾ ದಳಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ. ಅಲ್ಲದೆ ದಾಖಲೆರಹಿತವಾಗಿ ಮನೆ ಬಾಡಿಗೆಗೆ ನೀಡಿದ ಮನೆ ಮಾಲಿಕನನ್ನೂ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಸಲಾಗುತ್ತಿದೆ ಎಂದು ವೈಟ್ ಫೀಲ್ಡ್ ಡಿಸಿಪಿ ಗಿರೀಶ್ ತಿಳಿಸಿದ್ದಾರೆ.