ಮಂಡ್ಯ, ಜ 24 (DaijiworldNews/DB): ಚುನಾವಣೆ ಸಮೀಪಿಸುತ್ತಿದ್ದಂತೆ ವಿವಿಧ ರಾಜಕೀಯ ನಾಯಕರುಗಳ ನಡುವೆ ಮಾತಿನ ಸಮರವೂ ಜೋರಾಗಿದೆ. ಇದೀಗ ಸಂಸದೆ ಸುಮಲತಾ ಮತ್ತು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ನಡುವೆ ಮಾತಿನ ಸಮರ ಶುರುವಾಗಿದೆ.
ಸುಮಲತಾ ಬೆಂಗಳೂರಿನಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆಂಬ ನಿಖಿಲ್ ಹೇಳಿಕೆಗೆ ತಿರುಗೇಟು ನೀಡಿರುವ ಸಂಸದೆ ಸುಮಲತಾ, ಮಂಡ್ಯದಲ್ಲೇ ಸ್ಪರ್ಧಿಸುವುದಾಗಿ ಹೇಳಿ ರಾಮನಗರಕ್ಕೆ ಹೋಗಿರುವವರು ಯಾರು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ನಿಖಿಲ್ ಅಪ್ರಬುದ್ದ ಹೇಳಿಕೆ ನೀಡುತ್ತಾರೆಂದು ಸುಮಲತಾ ಕಿಡಿ ಕಾರಿದ್ದಾರೆ.
ಮಂಡ್ಯದಲ್ಲೇ ಇನ್ನೊಮ್ಮೆ ಸ್ಪರ್ಧಿಸುವುದಾಗಿ ಈ ಹಿಂದೆ ನಿಖಿಲ್ ಹೇಳಿದ್ದರು. ಆದರೆ ಇದೀಗ ರಾಮನಗರದಲ್ಲಿ ಸ್ಪರ್ಧಿಸಲು ತಯಾರಾಗುತ್ತಿದ್ದಾರೆ. ಯಾವುದೇ ಬೆಂಬಲರಹಿತವಾಗಿಯೂ ಬೆಂಗಳೂರು ಬಿಟ್ಟು ಮಂಡ್ಯಕ್ಕೆ ಬಂದಿದ್ದ ನನಗೆ ಅಸ್ತಿತ್ವ ನೀಡಿದ್ದೇ ಮಂಡ್ಯ. ಹೀಗಿರುವಾಗ ಮಂಡ್ಯ ಬಿಟ್ಟು ನಾನ್ಯಾಕೆ ಬೇರೆ ಕಡೆ ಹೋಗಲಿ ಎಂದು ಪ್ರಶ್ನಿಸಿದರು.
ನಿಖಿಲ್ ಹೇಳಿಕೆ ಬಗ್ಗೆ ನಾನು ಗಮನ ಹರಿಸಿಲ್ಲ. ಯಾರೋ ಈ ರೀತಿಯ ಹೇಳಿಕೆ ನೀಡಿ ಎಂಬುದಾಗಿ ಅವರಿಗೆ ಹೇಳಿಕೊಟ್ಟಿರಬೇಕು. ಅದಕ್ಕಾಗಿಯೇ ಅಪ್ರಬುದ್ದವಾಗಿ ಅವರು ಮಾತನಾಡುತ್ತಿದ್ದಾರೆ. ಮಂಡ್ಯದ ಮೇಲೆ ನಿಜವಾಗಿಯೂ ಅವರಿಗೆ ಕಳಕಳಿ ಇದ್ದಲ್ಲಿ ನಿಖಿಲ್ ಮಂಡ್ಯಕ್ಕೆ ಬಂದು ಸ್ಪರ್ಧಿಸಲಿ ಎಂದು ಇದೇ ವೇಳೆ ಸುಮಲತಾ ಸವಾಲೆಸೆದಿದ್ದಾರೆ.
ಜೆಡಿಎಸ್ ನಾಯಕರು ಹೇಳುವುದು ಒಂದು, ಮಾಡುವುದು ಇನ್ನೊಂದು. ಅವರು ಹೇಳುವುದು, ಮಾಡುವುದಕ್ಕೂ ಕೊನೆಗೆ ನಡೆದುಕೊಳ್ಳುವುದಕ್ಕೂ ಸಂಬಂಧವೇ ಇರುವುದಿಲ್ಲ. ನಿಖಿಲ್ ಒಂದೇ ಸ್ಪರ್ಧೆಯಲ್ಲಿ ಕ್ಷೇತ್ರ ಬದಲಾಯಿಸಿದ್ದಾರೆ. ಅವರ ಕುಟುಂಬದವರೂ ಎಷ್ಟೆಷ್ಟು ಕ್ಷೇತ್ರಗಳನ್ನು ಬದಲಾಯಿಸಿದ್ದಾರೆ ಎಂಬುದನ್ನು ಅವರು ಪಟ್ಟಿ ಮಾಡಲಿ. ನಿಖಿಲ್ ಎರಡೂವರೆ ಲಕ್ಷ ಮತಗಳ ಅಂತದಿಂದ ಗೆಲುವು ಸಾಧಿಸದಿದ್ದಲ್ಲಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ಹೇಳಿದ್ದ ನಾಯಕರೊಬ್ಬರು ಬಳಿಕ ಏನು ಮಾಡಿದರು? ಇದೇ ಕಾರಣಕ್ಕಾಗಿ ಜನ ಜೆಡಿಎಸ್ ನಾಯಕರ ಮೇಲೆ ನಂಬಿಕೆ ಉಳಿಸಿಕೊಂಡಿಲ್ಲ ಎಂದು ತಿರುಗೇಟು ನೀಡಿದರು.