ಚಿಕ್ಕಬಳ್ಳಾಪುರ, ಜ 23( DaijiworldNews/MS): ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಅವರ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿಯ 'ಅತ್ಯಂತ ಭ್ರಷ್ಟ ಸಚಿವ' ಎಂದು ಬಣ್ಣಿಸಿದ್ದಾರೆ.
ನಗರದಲ್ಲಿ ನಡೆದ ‘ಪ್ರಜಾಧ್ವನಿ’ ಯಾತ್ರೆಯಲ್ಲಿ ಮಾತನಾಡಿದ ಅವರು, 2013 ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಿಂದ ಅವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡಿದ ಬಗ್ಗೆ ವಿಷಾದವಿದೆ ಎಂದು ಹೇಳಿದ್ದಾರೆ.
ಸುಧಾಕರ್ಗೆ ರಾಜಕೀಯ ಜನ್ಮಕೊಟ್ಟಿದ್ದು ಕಾಂಗ್ರೆಸ್. ಕರ್ನಾಟಕ ಇತಿಹಾಸದ ಭ್ರಷ್ಟಾತಿ ಭ್ರಷ್ಟ ಮಂತ್ರಿ ಇದ್ದರೆ ಅದು ಸುಧಾಕರ. ಮಾಸ್ಕ್, ವೆಂಟಿಲೇಟರ್, ಆಮ್ಲಜನಕ ಸೇರಿದಂತೆ ಕೊರೊನಾ ಅವಧಿಯಲ್ಲಿ ₹ 2 ಸಾವಿರ ಕೋಟಿ ಲಂಚ ಹೊಡೆದಿದ್ದಾರೆ ಎಂದು ಸದನದಲ್ಲಿ ಹೇಳಿದೆ. ದಾಖಲೆ ಸರಿ ಇದ್ದರೂ ಭ್ರಷ್ಟಾಚಾರ ನಡೆದಿರುವುದನ್ನು ಒಪ್ಪಲಿಲ್ಲ.ಉತ್ತರವನ್ನು ನೀಡದೆ ನುಣುಚಿಕೊಂಡರು. ಎತ್ತಿನಹೊಳೆ, ಕೆ.ಸಿ.ವ್ಯಾಲಿ , ಎಚ್.ಎನ್.ವ್ಯಾಲಿ ಯೋಜನೆ ನನ್ನ ಅವಧಿಯದ್ದು. ಲೂಟಿ ಹೊಡೆಯುವುದಷ್ಟೇ ಸುಧಾಕರ್ ಸಾಧನೆ’ ಎಂದು ಹೇಳಿದ್ದಾರೆ.
ಈತ ವೈದ್ಯಕೀಯ ಶಿಕ್ಷಣ ಓದಿದ್ದಾನೊ ಅಥವಾ ನಕಲು ಮಾಡಿದನೊ ಗೊತ್ತಿಲ್ಲ. ಚಾಮರಾಜನಗರ ಆಸ್ಪತ್ರೆಯಲ್ಲಿ ನಡೆದ ದುರಂತರದಲ್ಲಿ ಆಮ್ಲಜನಕ ಇಲ್ಲದೆ 36 ಜನರು ಸತ್ತರು. ಆದರೆ 3 ಜನರು ಸತ್ತರು ಎಂದು ಹೇಳಿದರು. ರಾಜ್ಯದಲ್ಲಿ 4.5 ಲಕ್ಷ ಜನರು ಕರೋನಾ ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿದಾಗ ಈ ವ್ಯಕ್ತಿ ಆರೋಗ್ಯ ಸಚಿವರಾಗಲು ಅರ್ಹನೇ ? ಎಂದು ಪ್ರಶ್ನೆ ಮಾಡಿದ್ದಾರೆ.