ಹಾಸನ, ಜ 24 (DaijiworldNews/DB): ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ತಾನೇ ಎಂಬುದಾಗಿ ಜಿಪಂ ಮಾಜಿ ಸದಸ್ಯೆ ಭವಾನಿ ರೇವಣ್ಣ ಸ್ವಯಂ ಘೋಷಣೆ ಮಾಡಿದ್ದಾರೆ.
ಹಾಸನ ತಾಲೂಕಿನ ಸಾಲಗಾಮೆ ಹೋಬಳಿ ಕಕ್ಕೇಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಅಣ್ಣಪ್ಪ ಸ್ವಾಮಿ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ಕ್ಷೇತ್ರಕ್ಕೆ ನನ್ನನ್ನೇ ಅಭ್ಯರ್ಥಿಯನ್ನಾಗಿಸಲು ಎಲ್ಲರೂ ಮಾತುಕತೆ ಮಾಡಿ ನಿರ್ಣಯಿಸಿದ್ದಾರೆ. ಮುಂದಿನ ಕೆಲವೇ ದಿನಗಳಲ್ಲಿ ಅಧಿಕೃತ ಘೋಷಣೆಯಾಗಲಿದೆ ಎಂದರು.
ಹಾಸನ ವಿಧಾನಸಭಾ ಕ್ಷೇತ್ರ ಬಿಜೆಪಿ ಕ್ಷೇತ್ರವಾಗಿ ಕಳೆದ ಬಾರಿ ಬದಲಾಗಿದ್ದರಿಂದ ಕೆಲಸಗಳು ಹಾಗೇ ಉಳಿದುಕೊಂಡಿದೆ. ಅಲ್ಲಿ ಕೆಲಸ ಸರಿಯಾಗಿ ನಡೆಯಬೇಕಿದೆ. ನನ್ನನ್ನು ಅಲ್ಲಿನ ಅಭ್ಯರ್ಥಿಯಾಗಿಸಬೇಕೆಂಬ ನಿರ್ಣಯ ಈಗಾಗಲೇ ಆಗಿದೆ. ಕೆಲವೇ ದಿನಗಳಲ್ಲಿ ಪ್ರಕಟಗೊಳ್ಳಲಿರುವ ಪಟ್ಟಿಯಲ್ಲಿ ನನ್ನ ಹೆಸರಿರಲಿದೆ. ನಾನೇ ಅಲ್ಲಿನ ಜೆಡಿಎಸ್ ಅಭ್ಯರ್ಥಿ ಎಂದವರು ತಿಳಿಸಿದರು.
ಜನರ ಪರಿಚಯ, ಊರಿನ ಪರಿಚಯದಿಂದ ಕೆಲಸ ಮಾಡಲು ಹೆಚ್ಚು ಅನುಕೂಲವಾಗುತ್ತದೆ. ಹೀಗಾಗಿ ಈಗಿಂದಲೇ ಕ್ಷೇತ್ರ ಪ್ರವಾಸದಲ್ಲಿ ತೊಡಗಿದ್ದೇನೆ. ಈ ಊರಿನ ಅಭಿವೃದ್ದಿ ಮತ್ತು ಜನಸೇವೆಗಾಗಿ ಭಗವಂತ ನನಗೆ ಆಶೀರ್ವದಿಸಲಿ. ಮತ್ತೊಮ್ಮೆ ನಿಮ್ಮನ್ನು ಭೇಟಿ ಮಾಡುತ್ತೇನೆ ಎಂದು ಜನರಿಗೆ ಭವಾನಿ ರೇವಣ್ಣ ಭರವಸೆ ನೀಡಿದ್ದಾರೆ.
ಭವಾನಿ ರೇವಣ್ಣ ಹಾಸನದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕಳೆದೊಂದು ವರ್ಷದಿಂದ ಕೇಳಿ ಬರುತ್ತಿತ್ತು. ಈ ಕ್ಷೇತ್ರದಲ್ಲಿ ಅವರು ಬಿರುಸಿನ ಚಟುವಟಿಕೆಯನ್ನೂ ನಡೆಸುತ್ತಿದ್ದರು. ಈಗಾಗಲೇ ಚುನಾವಣೆ ಸಂಬಂಧ ಜೆಡಿಎಸ್ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.