ನವದೆಹಲಿ, ಜ 24 (DaijiworldNews/DB): ಭಾರೀ ಗದ್ದಲದ ಹಿನ್ನೆಲೆಯಲ್ಲಿ ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ನ ಮೇಯರ್ ಮತ್ತು ಉಪ ಮೇಯರ್ ಆಯ್ಕೆ ಪ್ರಕ್ರಿಯೆಯನ್ನು ಮಂಗಳವಾರ ಮತ್ತೆ ಮುಂದೂಡಲಾಗಿದೆ.
ಪದವೀಧರರು ಮತ್ತು ಚುನಾಯಿತ ಕೌನ್ಸಿಲರ್ಗಳ ಪ್ರಮಾಣ ವಚನದ ಬಳಿಕ ಸದನವನ್ನು 15 ನಿಮಿಷಗಳ ಕಾಲ ಮುಂದೂಡಲಾಯಿತು. ಆದರೆ ಈ ಕೆಲವು ಕೌನ್ಸಿಲರ್ಗಳು ತೀವ್ರ ಗದ್ದಲ ಎಬ್ಬಿಸಿದ ಹಿನ್ನೆಲೆಯಲ್ಲಿ ಮೇಯರ್, ಉಪ ಮೇಯರ್ ಆಯ್ಕೆ ನಡೆಯಲಿಲ್ಲ. ಬಿಜೆಪಿ ಕೌನ್ಸಿಲರ್ಗಳು ಮೋದಿ ಮೋದಿ ಘೋಷಣೆ ಕೂಗಿದ್ದಲ್ಲದೆ, ಎಎಪಿ ಕೌನ್ಸಿಲರ್ಗಳ ಆಸನಗಳ ಬಳಿ ಹೋಗಿ ಸಿಎಂ ಅರವಿಂದ ಕೇಜ್ರೀವಾಲ್ ವಿರುದ್ದ ಘೋಷಣೆ ಕೂಗಿದರು. ಈ ನಿಟ್ಟಿನಲ್ಲಿ ಸಭಾಧ್ಯಕ್ಷರು ಸದನವನ್ನು ಮುಂದೂಡಿದರು.
ಈ ವೇಳೆ ಎಎಪಿ ಸದಸ್ಯರು ನಾಚಿಕೆ, ಅವಮಾನ ಎಂದು ಕೂಗಿದರು. ಇದೆಲ್ಲದರ ನಡುವೆ ಲೆಫ್ಟಿನೆಂಟ್ ಗವರ್ನರ್ ನಾಮನಿರ್ದೇಶನ ಮಾಡಿದ ಸದಸ್ಯರೊಂದಿಗೆ ಹೊಸ 250 ಸದಸ್ಯರ ಎಂಸಿಡಿ ಹೌಸ್ ಮರು ಸೇರ್ಪಡೆ ಪ್ರಕ್ರಿಯೆ ನಡೆಯಿತು. ಇವರು ಜೈ ಶ್ರೀರಾಮ್, ಭಾರತ್ ಮಾತಾಕೀ ಜೈ ಘೋಷಣೆ ಕೂಗಿದ್ದು, ಈ ವೇಳೆ ಉಭಯ ಪಕ್ಷಗಳ ಕೌನ್ಸಿಲರ್ಗಳ ನಡುವೆ ವಾಗ್ವಾದವೇ ನಡೆಯಿತು.
ಈ ಹಿಂದೆಯೂ ದೆಹಲಿ ಎಂಸಿಡಿ ಮೇಯರ್ ಮತ್ತು ಉಪ ಮೇಯರ್ ಆಯ್ಕೆ ನಡೆಯಬೇಕಿದ್ದ ಸದನವನ್ನು ಮುಂದೂಡಲಾಗಿತ್ತು.