ಬೆಂಗಳೂರು, ಜ 23( DaijiworldNews/MS): ಬೆಂಗಳೂರಿನಲ್ಲಿ ಮಂಗಳವಾರ ಬೆಳಗ್ಗೆ ಕೆಆರ್ ಮಾರುಕಟ್ಟೆ ಫ್ಲೈಒವರ್ನಿಂದ ಹಣದ ಹೊಳೆ ಹರಿಸಿದ ಅರುಣ್ ಎಂಬಾತನನ್ನು ಅರೆಸ್ಟ್ ಮಾಡಲಾಗಿದೆ.
ಬೆಂಗಳೂರಿನ ಕೆಆರ್ ಮಾರುಕಟ್ಟೆಯಲ್ಲಿ ಹೋಂಡಾ ಆಕ್ಟಿವಾ ಸ್ಕೂಟಿಯಲ್ಲಿ ಬಂದಿದ್ದ ಈತ ಮಾರ್ಕೆಟ್ ಫ್ಲೈ ಓವರ್ ಮೇಲಿಂದ ಹಣವನ್ನು ತೂರಿ ಹಣದ ಮಳೆ ಸುರಿಸಿದ್ದಾನೆ. ಮಾರುಕಟ್ಟೆ ಸಿಗ್ನಲ್ ಮೇಲಿರುವ ಫ್ಲೈಓವರ್ ಮೇಲೆ ನಿಂತು ತಾನು ತಂದಿದ್ದ 10 ರೂ ನೋಟುಗಳ ರಾಶಿಯನ್ನು ಫ್ಲೈಓವರ್ ನ ಎರಡೂ ಬದಿಯಲ್ಲಿ ಎರೆಚಿದ್ದಾನೆ. ಆಗಸದಿಂದ ನೋಟಿನ ರಾಶಿ ಕೆಳಗೆ ಬೀಳುತ್ತಿರುವುದನ್ನು ನೋಡಿದ ಜನ ಹಿಂದೆ ಮುಂದೆ ನೋಡದೇ ಅದನ್ನು ಆಯ್ದು ಕೊಳ್ಳಲು ಮುಂದಾಗಿದ್ದಾರೆ. ಇದರಿಂದ ಸುಮಾರು ಅರ್ಧಗಂಟೆಗಳ ಕಾಲ ಫ್ಲೈಓವರ್ ಕೆಳಗೆ ಹಾಗೂ ಮೇಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹಣವನ್ನು ಎರಚಿದ ಬಳಿಕ ಅಲ್ಲಿಂದ ತೆರಳಿದ್ದ. ಈ ವಿಡಿಯೋಗಳು ವ್ಯಾಪಕ ವೈರಲ್ ಆಗಿತ್ತು.
ಬೆಂಗಳೂರಿನ ನಾಗರಬಾವಿಯ ನಿವಾಸಿ ಅರುಣ್ ವೃತ್ತಿಯಲ್ಲಿ ಇವೆಂಟ್ ಪ್ಲಾನರ್ ಆಗಿರುವ ಆರೋಪಿ ಅರುಣ್ ಮೇಲೆ ಕೆಆರ್ ಮಾರ್ಕೆಟ್ ಠಾಣಾ ವ್ಯಾಪ್ತಿಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಐಪಿಸಿ 283,290 ಹಾಗೂ ಕೆಪಿ ಆ್ಯಕ್ಟ್ 92(d) ಅಡಿಯಲ್ಲಿ ಎಫ್ ಐ ಆರ್ ಹಾಕಲಾಗಿದ್ದು ಈತನನ್ನು ವಶಕ್ಕೆ ಪಡೆದಿದ್ದಾರೆ.
ನಾನು ವಿದ್ಯಾವಂತನಾಗಿದ್ದೇನೆ. ಕೆಟ್ಟ ಉದ್ದೇಶದಿಂದ ಹಣ ಎಸೆದಿಲ್ಲ .ನನಗೂ ಬುದ್ಧಿಯಿದೆ. ಸಾರ್ವಜನಿಕವಾಗಿ ಹಣ ಎಸೆದಿದ್ದು ತಪ್ಪು ಎಂದು ನನಗೆ ಗೊತ್ತಿದೆ. ರೀಲ್ಸ್ ಮಾಡುವ ಉದ್ದೇಶದಿಂದ ಹಣ ಎಸೆದಿಲ್ಲ. ಸಮಯ ನೀಡಿದರೆ ಎಲ್ಲವೂ ಹೇಳುತ್ತೇನೆ ಎಂದು ಅರುಣ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.