ಶ್ರೀನಗರ, ಜ 24 (DaijiworldNews/DB): ಪಾಕಿಸ್ತಾನ ಉಗ್ರರ ಮೇಲೆ ಭಾರತೀಯ ಸೈನಿಕರು 2016ರಲ್ಲಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಸಾಕ್ಷ್ಯ ಒದಗಿಸುವಂತೆ ಕೇಳಿದ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರ ಮಾತಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾರತ್ ಜೋಡೋ ಯಾತ್ರೆಯ ಮಧ್ಯೆಯೇ ಈ ಕುರಿತು ಮಂಗಳವಾರ ಮಾತನಾಡಿರುವ ರಾಹುಲ್ ಗಾಂಧಿ, ದಿಗ್ವಿಜಯ್ ಸಿಂಗ್ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಯಾವುದೇ ಪುರಾವೆಗಳನ್ನು ನೀಡಬೇಕಿಲ್ಲ. ಕಾಂಗ್ರೆಸ್ನ ನಿಲುವೂ ಇದೇ ಆಗಿದೆ ಎಂದರು.
ಇನ್ನು ದಿಗ್ವಿಜಯ್ ಹೇಳಿಕೆಗೂ ಕಾಂಗ್ರೆಸ್ಗೂ ಯಾವುದೇ ಸಂಬಂಧವಿಲ್ಲ ಎಂದು ಎಐಸಿಸಿ ಸಂವಹನ ವಿಭಾಗದ ಉಸ್ತುವಾರಿ ಜೈರಾಮ್ ರಮೇಶ್ ಅವರೂ ಹೇಳಿದ್ದಾರೆ.
ಭಾರತ್ ಜೋಡೋ ಯಾತ್ರೆ ವೇಳೆ ಕಾಶ್ಮೀರದಲ್ಲಿ ಮಾತನಾಡಿದ್ದ ದಿಗ್ವಿಜಯ್ ಸಿಂಗ್, ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಕೇಂದ್ರ ಸರ್ಕಾರ ಮಾತಾಡುತ್ತಾ, ಉಗ್ರರನ್ನು ಹತ್ಯೆಗೈದಿರುವುದಾಗಿ ಹೇಳುತ್ತಿದೆ. ಆದರೆ ಇದಕ್ಕೆ ಯಾವುದೇ ಸಾಕ್ಷ್ಯಗಳನ್ನು ನೀಡುತ್ತಿಲ್ಲ. ಸುಳ್ಳಿನಲ್ಲೇ ಸರ್ಕಾರ ಆಡಳಿತ ನಡೆಸುತ್ತಿದೆ ಎಂದಿದ್ದರು. ದಿಗ್ವಿಜಯ್ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.