ನವದೆಹಲಿ, ಜ 24 (DaijiworldNews/DB): ದೆಹಲಿಯ ಶ್ರದ್ದಾ ವಾಕರ್ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲ ವಿರುದ್ದ ದೆಹಲಿ ಪೊಲೀಸರು 6,629 ಪುಟಗಳ ಚಾರ್ಜ್ ಶೀಟ್ನ್ನು ಸಾಕೇತ್ ನ್ಯಾಯಾಲಯಕ್ಕೆ ಮಂಗಳವಾರ ಸಲ್ಲಿಸಿದ್ದಾರೆ.
ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವಿರಾಲ್ ಶುಕ್ಲಾ ಅವರು ಚಾರ್ಜ್ಶೀಟ್ನಲ್ಲಿರುವ ಪುಟಗಳ ಸಂಖ್ಯೆ ಕೇಳಿದಾಗ 6,629 ಪುಟಗಳಿರುವುದಾಗಿ ತನಿಖಾಧಿಕಾರಿ ಹೇಳಿದರು. ಇನ್ನು ಆರೋಪಿಯ ನ್ಯಾಯಾಂಗ ಬಂಧನದ ಅವಧಿಯನ್ನು ಫೆಬ್ರವರಿ 7ರವರೆಗೆ ಅಂದರೆ 14 ದಿನಗಳ ಕಾಲ ವಿಸ್ತರಿಸಿ ನ್ಯಾಯಾಲಯ ಆದೇಶಿಸಿದೆ.
ಮಂಗಳವಾರಕ್ಕೆ ಆತನ ನ್ಯಾಯಾಂಗ ಬಂಧನ ಅವಧಿ ಕೊನೆಗೊಂಡ ಹಿನ್ನೆಲೆಯಲ್ಲಿ ವೀಡಿಯೋ ಕಾನ್ಫರೆನ್ಸ್ ಮುಖಾಂತರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇನ್ನು ಇದೇ ವೇಳೆ ನ್ಯಾಯವಾದಿ ಎಂ.ಎಸ್. ಖಾನ್ ಅವರನ್ನು ಬದಲಾಯಿಸಲು ಬಯಸುತ್ತಿದ್ದೇನೆ ಎಂದು ಆರೋಪಿ ನ್ಯಾಯಾಲಯದ ಮುಂದೆ ಹೇಳಿದ್ದಾನೆ ಎನ್ನಲಾಗಿದೆ.