ಬೆಂಗಳೂರು, ಜ 25( DaijiworldNews/MS): ಫೆಬ್ರವರಿ 10 ರಿಂದ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಫೆ. 17 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಅಧಿವೇಶನದ ಹಿನ್ನಲೆ ಈಗಾಗಲೇ ಸಿಎಂ ಇಲಾಖಾವಾರು ಬಜೆಟ್ ಪೂರ್ವಭಾವಿ ಸಭೆ ಆರಂಭಿಸಿದ್ದು, ಚುನಾವಣೆ ಸಮೀಪವಿರುವ ಹಿನ್ನೆಲೆಯಲ್ಲಿ ಈ ಬಾರಿ ಬಜೆಟ್ ನಲ್ಲಿ ಬಂಪರ್ ಘೋಷಣೆಗಳನ್ನು ಮಾಡುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಉಚಿತ ವಿದ್ಯುತ್ ಪೂರೈಕೆ, ವಿವಿಧ ಪಿಂಚಣಿ ಹೆಚ್ಚಳ, ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಹೆಚ್ಚಿನ ಸಬ್ಸಿಡಿ ನೀಡುವಂತಹ ಯೋಜನೆಗಳು, ಕಲ್ಯಾಣ ಕರ್ನಾಟಕಕ್ಕೆ ಹಲವು ಯೋಜನೆಗಳನ್ನು ಬಜೆಟ್ ನಲ್ಲಿ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಆದರೆ ಕಳೆದ ಬಜೆಟ್ ನಲ್ಲಿ ಘೋಷಣೆ ಮಾಡಿದ್ದ 132 ಯೋಜನೆಗಳು ಇನ್ನು ಅನುಷ್ಟಾನಗೊಂಡಿಲ್ಲ. ಚೊಚ್ಚಲ ಬಜೆಟ್ ನಲ್ಲಿ ಬೊಮ್ಮಾಯಿ ಅವರು ೩೪ ಇಲಾಖೆಗಳಿಗೆ ಸಂಬಂಧಿಸಿದಂತೆ 391 ಘೋಷಣೆಗಳನ್ನು ಮಾಡಿದ್ದರು. ಇನ್ನೂ ಸಿಎಸ್ ವಂದಿತಾ ಶರ್ಮಾ ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿರುವ ಸಿಎಂ ಸರ್ಕಾರಿ ಆದೇಶ ಹೊರಡಿಸಿರುವ ಘೋಷಣೆಗಳ ಕುರಿತು ತ್ವರಿತ ಅನುಷ್ಟಾನ ಸಲಹೆ ನೀಡಿದ್ದಾರೆ.