ನವದೆಹಲಿ, ಜ 25 (DaijiworldNews/HR): ಬಿಬಿಸಿ ನಿರ್ಮಿಸಿರುವ ಪ್ರಧಾನಿ ನರೇಂದ್ರ ಮೋದಿ ಕುರಿತಾದ ವಿವಾದಾತ್ಮಕ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲು ಜೆಎನ್ಯು ವಿದ್ಯಾರ್ಥಿಗಳ ಒಕ್ಕೂಟ ಉದ್ದೇಶಿಸಿತ್ತು. ಆದರೆ ಯೂನಿಯನ್ ಕಚೇರಿಯಲ್ಲಿ ವಿದ್ಯುತ್ ಹಾಗೂ ಇಂಟರ್ ನೆಂಟ್ ಸಂಪರ್ಕವನ್ನು ವಿವಿ ಆಡಳಿತ ಕಡಿತಗೊಳಿಸಿದ್ದರಿಂದ ಸಾಕ್ಷ್ಯಚಿತ್ರ ಪ್ರದರ್ಶಿಸಲು ಸಾಧ್ಯವಾಗದಿರುವುದಕ್ಕೆ ಜೆಎನ್ ವಿವಿ ಕ್ಯಾಂಪಸ್ನಲ್ಲಿ ಕಲ್ಲು ತೂರಾಟ ನಡೆದಿದೆ.
ಅಖಿಲ ಭಾರತ ವಿದ್ಯಾರ್ಥಿಗಳ ಅಸೋಸಿಯೇಷನ್ ರಾಷ್ಟ್ರೀಯ ಅಧ್ಯಕ್ಷ ಎನ್ ಸಾಯಿ ಬಾಲಾಜಿ ಮಾತನಾಡಿ, ವಿದ್ಯಾರ್ಥಿಗಳು ಆನ್ ಲೈನ್ ಆ್ಯಪ್ ಮೂಲಕ ತಮ್ಮ ಮೊಬೈಲ್ ಫೋನ್ ಗಳಲ್ಲಿ ಸಾಕ್ಷ್ಯಚಿತ್ರ ಡೌನ್ ಲೋಡ್ ಮಾಡಿಕೊಂಡು ವೀಕ್ಷಿಸಿದ್ದು, ಅಲ್ಲದೇ ಅದನ್ನು ಶೇರ್ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಸಾಕ್ಷ್ಯಚಿತ್ರ ಪ್ರದರ್ಶಿಸುತ್ತಿದ್ದಾಗ ವಿವಿ ಕ್ಯಾಂಪಸ್ ನಲ್ಲಿ ಕಲ್ಲು ತೂರಾಟದ ವರದಿಯಾಗಿದ್ದು, ಘಟನೆಯಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ಮಂಗಳವಾರ ರಾತ್ರಿ 8-50ರ ಸುಮಾರಿನಲ್ಲಿ ವಿವಿ ಆಡಳಿತ ಜೆಎನ್ಯು ಎಸ್ ಯು ಕಚೇರಿಯಲ್ಲಿ ವಿದ್ಯುತ್ ಕಡಿತ ಮಾಡಿದ್ದು, ಇದರಿಂದ ಸಾಕ್ಷ್ಯಚಿತ್ರ ಪ್ರದರ್ಶನ ವಿಳಂಬವಾಯಿತು ಎಂದು ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸುಮಾರು 50 ಪೊಲೀಸ್ ಸಿಬ್ಬಂದಿ ಮತ್ತು ವಿಶ್ವವಿದ್ಯಾಲಯದ ಭದ್ರತಾ ಸಿಬ್ಬಂದಿಯನ್ನು ಕ್ಯಾಂಪಸ್ನಲ್ಲಿ ನಿಯೋಜಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.