ಮಡಿಕೇರಿ, ಜ 25( DaijiworldNews/MS): ವ್ಯಕ್ತಿಯೊಬ್ಬರಿಂದ 2 ಸಾವಿರ ರೂ. ನಗದು ಹಾಗೂ ಒಂದು ಬಾಟಲಿ ಮದ್ಯವನ್ನು ಸ್ವೀಕರಿಸುತ್ತಿದ್ದ ಮಡಿಕೇರಿ ಸರ್ವೇ ಇಲಾಖೆಯ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮರ ಕಡಿಯುವುದಕ್ಕಾಗಿ ಸರ್ವೇ ಮಾಡಿಕೊಡಲು ಲಂಚ ಪಡೆಯುತ್ತಿದ್ದ ವೇಳೆ, ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಸರ್ವೇಯರ್ ಮಾದಪ್ಪ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಆರೋಪಿಯಾಗಿದ್ದಾರೆ.
ಬಾಡಗ ಗ್ರಾಮದ ತೋಟದಲ್ಲಿ ದೂರುದಾರರು ಮನೆ ನಿರ್ಮಾಣಕ್ಕಾಗಿ 3 ಬೀಟೆ ಮರಗಳನ್ನು ಕಡಿಯಲು ಅರಣ್ಯ ಇಲಾಖೆಗೆ ಸರ್ವೇ ಮಾಡಿ ವರದಿ ನೀಡಲು ಆರು ತಿಂಗಳ ಹಿಂದೆ ಸರ್ವೇ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು ಅಲ್ಲದೆ ಸರ್ಕಾರಿ ಶುಲ್ಕವನ್ನು ಪಾವತಿ ಮಾಡಿದ್ದರು. ಇದಕ್ಕಾಗಿ ಮಾದಪ್ಪ 15 ಸಾವಿರ ರೂ ಲಂಚ ಬೇಡಿಕೆ ಇಟ್ಟು ಅದನ್ನು ದೂರುದಾರರಿಂದ ಮೊದಲೇ ಪಡೆದಿದ್ದರು. ಮತ್ತೆ 2 ಸಾವಿರ ರೂ. ಹಾಗೂ ಹಂಡ್ರೆಡ್ ಪೈಪರ್ ಅಥವಾ ಬ್ಲಾಕ್ ಡಾಗ್ ಮದ್ಯದ ಬಾಟಲಿ ನೀಡಲು ಒತ್ತಾಯಿಸಿದ್ದರು.
ಇದರಿಂದ ಬೇಸರಗೊಂಡ ತೋಟದ ಮಾಲೀಕರು ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು. ಮಂಗಳವಾರ ಸಂಜೆ 2 ಸಾವಿರ ನಗದು ಹಾಗೂ ಮದ್ಯದ ಬಾಟಲಿ ಪಡೆಯುವಾಗ ಮಾದಪ್ಪ ಅವರನ್ನು ಬಂಧಿಸಲಾಯಿತು’ ಎಂದು ಪೊಲೀಸರು ತಿಳಿಸಿದ್ದಾರೆ. ಮೈಸೂರು ಲೋಕಾಯುಕ್ತ ಎಸ್.ಪಿ. ಸುರೇಶ್ಬಾಬು, ಡಿವೈಎಸ್ಪಿ ಎಂ.ಎಸ್.ಪವನ್ಕುಮಾರ್, ಇನ್ಸ್ಪೆಕ್ಟರ್ ಲೋಕೇಶ್ ಕಾರ್ಯಾಚರಣೆಯಲ್ಲಿ ತಂಡದಲ್ಲಿದ್ದರು.