ನವದೆಹಲಿ, ಜ 25 (DaijiworldNews/DB): ಗೂಗಲ್ನ ಆಂಡ್ರಾಯ್ಡ್ ಮತ್ತು ಆಪಲ್ನ ಐಒಎಸ್ಗೆ ಪರ್ಯಾಯವಾಗಿ ರೂಪುಗೊಂಡಿರುವ ಸ್ವದೇಶಿ ನಿರ್ಮಿತ ಭಾರ್ ಒಎಸ್ ಆಪರೇಟಿಂಗ್ ಸಿಸ್ಟಮ್ನ ಪರೀಕ್ಷೆ ಮಂಗಳವಾರ ಯಶಸ್ವಿಯಾಗಿ ನಡೆದಿದೆ. ಶೀಘ್ರ ಈ ದೇಶೀಯ ಆಪರೇಟಿಂಗ್ ಸಿಸ್ಟಮ್ ಕಾರ್ಯರೂಪಕ್ಕೆ ಬರಲಿದೆ.
ಸ್ಮಾರ್ಟ್ಫೋನ್ ಉದ್ಯಮದ ಆಂಡ್ರಾಯ್ಡ್ ಮತ್ತು ಐಒಎಸ್ ಮೇಲಿನ ಅವಲಂಬನೆ ತಪ್ಪಿಸಿ ಸ್ವದೇಶಿ ನಿರ್ಮಿತ ಸ್ಮಾರ್ಟ್ಫೋನ್ಗಳ ತಯಾರಿಕೆಗೆ ಒತ್ತು ನೀಡುವುದು ಇದರ ಉದ್ದೇಶವಾಗಿದೆ. ಸ್ವದೇಶ ಕೇಂದ್ರ ಸಂಪೂರ್ಣವೇ ಈ ಸಿಸ್ಟಂ ಅಭಿವೃದ್ದಿಗೆ ಧನಸಹಾಯ ಮಾಡಿದ್ದು, ಸರ್ಕಾರಿ ಹಾಗೂ ಸಾರ್ವಜನಿಕ ವ್ಯವಸ್ಥೆಗಳಲ್ಲಿ ಬಳಕೆಗೆ ಯೋಗ್ಯವಾಗಿದೆ. ಮುಂದಿನ ದಿನಗಳಲ್ಲಿ ಸ್ವದೇಶಿ ನಿರ್ಮಿತ ಸ್ಮಾರ್ಟ್ಫೋನ್ ತಯಾರಿಕೆಗೆ ಅವಕಾಶ ದೊಡ್ಡ ಮಟ್ಟದಲ್ಲಿ ದೊರಕಿಸಿಕೊಡುವ ಉದ್ದೇಶವನ್ನೂ ಈ ಯೋಜನೆ ಹೊಂದಿದೆ. ಜಾಂಡ್ ಕೆ ಆಪರೇಶನ್ಸ್ ಪ್ರೈವೆಟ್ ಸಂಸ್ಥೆಯವರು ರೂಪಿಸಿರುವ ಭಾರ್ ಒಎಸ್ ಆಪರೇಟಿಂಗ್ ಸಿಸ್ಟಮ್ಗೆ ಐಐಟಿ ಮದ್ರಾಸ್ನ ಸೆಕ್ಷನ್ 8 ಕಂಪೆನಿಯು ಸಹಕರಿಸಿದೆ.
ದೇಶೀಯ ಆಪರೇಟಿಂಗ್ ಸಿಸ್ಟಮ್ ಭಾರ್ ಒಎಸ್ ಆಪರೇಟಿಂಗ್ನ್ನು ಕೇಂದ್ರ ಸಚಿವರಾದ ಅಶ್ಚಿನಿ ವೈಷ್ಣವ್ ಮತ್ತು ಧರ್ಮೇಂದ್ರ ಪ್ರಧಾನ್ ಬಿಡುಗಡೆಗೊಳಿಸಿ ಟೆಸ್ಟಿಂಗ್ನ್ನೂ ವೀಕ್ಷಿಸಿದರು. ಬಳಿಕ ಮಾತನಾಡಿದ ಧರ್ಮೇಂದ್ರ ಪ್ರಧಾನ್, ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ಪರಿಕಲ್ಪನೆಯ ಭಾಗವಾಗಿ ಈ ಸಿಸ್ಟಮ್ನ್ನು ಅಭಿವೃದ್ದಿಪಡಿಸಲಾಗಿದೆ. ಮೊದಲೆಲ್ಲಾ ಡಿಜಿಟಲ್ ಇಂಡಿಯಾ ಪ್ರಸ್ತಾವಿಸುವ ವೇಳೆ ಕೆಲವರು ಅದರ ಬಗ್ಗೆ ವ್ಯಂಗ್ಯವಾಡಿದ್ದರು. ಆದರೆ ಭಾರತದ ಶಕ್ತಿಯ ಬಗ್ಗೆ ಪ್ರಸ್ತುತ ತಾಂತ್ರಿಕ ತಜ್ಞರು, ಉದ್ಯಮಿಗಳು, ನೀತಿ ನಿರೂಪಕರು ಸೇರಿದಂತೆ ಎಲ್ಲರೂ ಬೆರಗಾಗಿದ್ದಾರೆ ಎಂದರು.