ನವದೆಹಲಿ, ಜ 25 (DaijiworldNews/DB): ಭಾರತದ ಪ್ರಜಾಪ್ರಭುತ್ವದ ಭವಿಷ್ಯ ಯುವ ಮತದಾರರು ಎಂದು ಭಾರತದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ರಾಷ್ಟ್ರೀಯ ಮತದಾರರ ದಿನದ ಹಿನ್ನೆಲೆಯಲ್ಲಿ ಬುಧವಾರ ಮಾತನಾಡಿದ ಅವರು, 2000ರ ಆಸುಪಾಸು ಮತ್ತು ಆನಂತರ ಜನಿಸಿದ ಯುವ ಜನರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವ ಕಾರ್ಯ ಪ್ರಾರಂಭವಾಗಿದೆ. ಭಾರತದ ಪ್ರಜಾಪ್ರಭುತ್ವದ ಭವಿಷ್ಯ ಯುವ ಮತದಾರರು. ಮತದಾನ ಪ್ರಕ್ರಿಯೆಯಲ್ಲಿ ಅವರ ಸಕ್ರಿಯ ಪಾಲ್ಗೊಳ್ಳುವಿಕೆಯ ಹಿಂದೆ ದೇಶದ ಭವಿಷ್ಯ ಅಡಗಿದೆ ಎಂದರು.
ವಿದ್ಯಾರ್ಥಿಗಳು ಮತದಾನದ ವಯಸ್ಸು ತಲುಪುವುದಕ್ಕೂ ಮೊದಲು ಪ್ರಜಾಪ್ರಭುತ್ವದ ಬೇರು ಬಿತ್ತಬೇಕು. ಶಾಲಾ ಹಂತದಲ್ಲಿಯೇ ಇದರ ಬಗ್ಗೆ ಅರಿತುಕೊಳ್ಳಬೇಕು. ಆ ಮೂಲಕ ದೇಶದ ಬೆಳವಣಿಗೆ, ಭವಿಷ್ಯಕ್ಕೆ ಕೊಡುಗೆ ನೀಡಬೇಕು ಎಂದವರು ಆಶಿಸಿದರು.
ಜನವರಿ 25 ಭಾರತದ ಚುನಾವಣಾ ಆಯೋಗದ ಸಂಸ್ಥಾಪನಾ ದಿನವಾಗಿದೆ. 2011ರಿಂದ ಈ ದಿನವನ್ನು ರಾಷ್ಟ್ರೀಯ ಮತದಾರರ ದಿನವಾಗಿ ಆಚರಿಸಲಾಗುತ್ತದೆ.