ನವದೆಹಲಿ, ಜ 25( DaijiworldNews/MS): 2021ರಲ್ಲಿ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರನ್ನು ವಾಹನ ಚಲಾಯಿಸಿ ಹತ್ಯೆಗೈದ ಆರೋಪ ಹೊತ್ತಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರಿಗೆ ಸುಪ್ರೀಂ ಕೋರ್ಟ್ ಇಂದು ಎಂಟು ವಾರಗಳ ಜಾಮೀನು ಮಂಜೂರು ಮಾಡಿದೆ.
ಆಶಿಶ್ ಮಿಶ್ರಾ ಜಾಮೀನಿನ ಮೇಲೆ ಹೊರ ಬಂದ ಬಳಿಕ ಉತ್ತರ ಪ್ರದೇಶ ಅಥವಾ ದೆಹಲಿ ಮತ್ತು ಅದರ ಹತ್ತಿರದ ಪ್ರದೇಶಗಳಲ್ಲಿ ವಾಸಿಸುವಂತಿಲ್ಲ. ಒಂದು ವಾರದೊಳಗೆ ಉತ್ತರ ಪ್ರದೇಶವನ್ನು ತೊರೆಯುವಂತೆ ಆದೇಶಿಸಲಾಗಿದೆ.
ಆಶಿಶ್ ಮಿಶ್ರಾ ಅಥವಾ ಅವರ ಕುಟುಂಬದವರು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಯಾವುದೇ ಪ್ರಯತ್ನ ಕಂಡುಬಂದರೆ ಅವರ ಜಾಮೀನು ರದ್ದುಗೊಳಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ.
2021ರ ಅಕ್ಟೋಬರ್ 3 ರಂದು, ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಭೇಟಿಯ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾಗ ಭುಗಿಲೆದ್ದ ಹಿಂಸಾಚಾರದಲ್ಲಿ ಲಖಿಂಪುರ ಖೇರಿಯಲ್ಲಿ ಎಂಟು ಜನರು ಸಾವನ್ನಪ್ಪಿದರು. ಉತ್ತರ ಪ್ರದೇಶ ಪೊಲೀಸ್ ಎಫ್ಐಆರ್ನ ಪ್ರಕಾರ, ಆಶಿಶ್ ಮಿಶ್ರಾ ಕುಳಿತಿದ್ದ ಎಸ್ಯುವಿ ಹರಿದು ನಾಲ್ವರು ರೈತರು ಸಾವಿಗೀಡಾಗಿದ್ದರು. ಘಟನೆಯ ನಂತರ, ಕೋಪಗೊಂಡ ರೈತರು ಚಾಲಕ ಮತ್ತು ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಹೊಡೆದುಕೊಂದಿದ್ದರು. ಇದೀಗ ರದ್ದಾದ ಕೇಂದ್ರದ ಕೃಷಿ ಸುಧಾರಣಾ ಕಾನೂನುಗಳ ಬಗ್ಗೆ ಪ್ರತಿಪಕ್ಷಗಳು ಮತ್ತು ರೈತ ಗುಂಪುಗಳ ಆಕ್ರೋಶಕ್ಕೆ ಕಾರಣವಾದ ಹಿಂಸಾಚಾರದಲ್ಲಿ ಪತ್ರಕರ್ತ ಕೂಡಾ ಸಾವಿಗೀಡಾಗಿದ್ದರು.