ನವದೆಹಲಿ, ಜ 25 (DaijiworldNews/HR): ಪಾಕಿಸ್ತಾನವು ಪಾಠ ಕಲಿತಿದೆ ಮತ್ತು ಭಾರತದೊಂದಿಗೆ ಶಾಂತಿಯಿಂದ ಬದುಕಲು ಬಯಸುತ್ತದೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಹೇಳಿದ ಕೆಲವು ದಿನಗಳ ನಂತರ, ಶಾಂಘೈ ಸಹಕಾರ ಸಂಸ್ಥೆ (ಎಸ್ಸಿಒ) ವಿದೇಶಾಂಗ ಮಂತ್ರಿಗಳ ಸಭೆಗೆ ಸೇರಲು ಪಾಕಿಸ್ತಾನಕ್ಕೆ ಆಹ್ವಾನವನ್ನು ನೀಡಿದೆ.
ಪಾಕಿಸ್ತಾನವು ಆಹ್ವಾನವನ್ನು ಸ್ವೀಕರಿಸಿದರೆ, ಸುಮಾರು 12 ವರ್ಷಗಳಲ್ಲಿ ಇದು ಮೊದಲ ಭೇಟಿಯಾಗಿದೆ. ಜುಲೈ 2011ರಲ್ಲಿ ಹಿನಾ ರಬ್ಬಾನಿ ಖಾರ್ ಅವರು ಭಾರತಕ್ಕೆ ಭೇಟಿ ನೀಡಿದ ಕೊನೆಯ ಪಾಕಿಸ್ತಾನಿ ವಿದೇಶಾಂಗ ಸಚಿವರಾಗಿದ್ದರು.
ಮೇ 4 ಮತ್ತು 5 ರಂದು ಗೋವಾದಲ್ಲಿ ನಡೆಯಲಿರುವ ವಿದೇಶಾಂಗ ಸಚಿವರ ಸಭೆಗೆ, ಶಾಂಘೈ ಸಹಕಾರ ಸಂಘಟನೆಯ (ಎಸ್ಸಿಒ) ಎಲ್ಲಾ ಸದಸ್ಯರಿಗೆ ಭಾರತವು ಔಪಚಾರಿಕವಾಗಿ ಆಹ್ವಾನವನ್ನು ಕಳುಹಿಸಿದ್ದು, ಚೀನಾದ ಹೊಸ ವಿದೇಶಾಂಗ ಸಚಿವ ಕಿನ್ ಗ್ಯಾಂಗ್ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಅವರನ್ನೂ ಭಾರತೀಯ ಹೈಕಮಿಷನ್ ಮೂಲಕ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರಿಂದ ಆಹ್ವಾನ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ಭಾರತ ಮತ್ತು ಪಾಕಿಸ್ತಾನದ ಹೊರತಾಗಿ, ಚೀನಾ, ರಷ್ಯಾ, ಕಜಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಅನ್ನು ಒಳಗೊಂಡಿದೆ. ಮಧ್ಯ ಏಷ್ಯಾದ ದೇಶಗಳ ಜೊತೆಗೆ ಚೀನಾ ಮತ್ತು ರಷ್ಯಾದ ವಿದೇಶಾಂಗ ಮಂತ್ರಿಗಳಿಗೂ ಇದೇ ರೀತಿಯ ಆಹ್ವಾನಗಳನ್ನು ಕಳುಹಿಸಲಾಗಿದೆ. ಆದರೆ ದ್ವಿಪಕ್ಷೀಯ ಸಂಬಂಧಗಳಲ್ಲಿ ಸಾರ್ವಕಾಲಿಕ ಕಡಿಮೆ ಇರುವ ಪಾಕಿಸ್ತಾನದ ವಿದೇಶಾಂಗ ಸಚಿವರಿಗೆ ಭಾರತದ ಆಹ್ವಾನವು ವಿಶೇಷವಾಗಿ ಮಹತ್ವದ್ದಾಗಿದೆ.
ಈ ಕುರಿತು ಮಾತನಾಡಿದ ಉನ್ನತ ಅಧಿಕಾರಿಯೊಬ್ಬರು, ಭಾರತ ಮತ್ತು ಪಾಕಿಸ್ತಾನದ ನಡುವಿನ ಸಮಸ್ಯೆಗಳು ಯಾವುದಾದರೂ ಇದ್ದರೆ, ಭಯೋತ್ಪಾದನೆ ಮತ್ತು ಹಿಂಸಾಚಾರದಿಂದ ಮುಕ್ತವಾದ ವಾತಾವರಣದಲ್ಲಿ ದ್ವಿಪಕ್ಷೀಯ ಮತ್ತು ಶಾಂತಿಯುತವಾಗಿ ಪರಿಹರಿಸಬೇಕು ಎಂಬುದು ಭಾರತದ ಸ್ಥಿರ ನಿಲುವು. ಅಂತಹ ಅನುಕೂಲಕರ ವಾತಾವರಣವನ್ನು ನಿರ್ಮಿಸುವ ಜವಾಬ್ದಾರಿ ಪಾಕಿಸ್ತಾನದ ಮೇಲಿದೆ ಎಂದಿದ್ದಾರೆ.