ತುಮಕೂರು, ಜ 25 (DaijiworldNews/DB): ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಆಲಿ ಬಾಬಾ ಮತ್ತು 40 ಕಳ್ಳರಂತೆ ಆ ಪಕ್ಷ ಸರ್ಕಾರ ನಡೆಸುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ನಗರದ ಗಾಜಿನ ಮನೆಯಲ್ಲಿ ಮಂಗಳವಾರ ಕಾಂಗ್ರೆಸ್ 'ಪ್ರಜಾ ಧ್ವನಿ' ಬಸ್ ಯಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಶೇ 40ರಷ್ಟು ಕಮಿಷನ್ ಪಡೆದು ಹಣ ಹಂಚಿಕೊಳ್ಳುತ್ತಿರುವ ಬಿಜೆಪಿಗರು ಆಲಿ ಬಾಬಾ ಮತ್ತು 40 ಕಳ್ಳರಂತೆ ಸರ್ಕಾರ ನಡೆಸುತ್ತಿದ್ದಾರೆ. ಭ್ರಷ್ಟಾಚಾರ ಮತ್ತು ಸುಳ್ಳಿನ ಮೂಲಕ ಹೆಚ್ಚು ದಿನ ಬದುಕಲು ಅವರಿಗೆ ಸಾಧ್ಯವಿಲ್ಲ ಎಂದರು.
ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ಭ್ರಷ್ಟಾಚಾರ ಬಗ್ಗೆ ಮಾತಾಡಿಲ್ಲ. ಮೂರೂವರೆ ವರ್ಷಗಳಿಂದ ಅಧಿಕಾರ ನಡೆಸುತ್ತಿದ್ದಾರೆ, ಆಗಲೂ ಮಾತಾಡಿಲ್ಲ. ಆದರೆ ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ನಾವು ಮಾತನಾಡಲು ಆರಂಭಿಸಿದಾಗ ನಮ್ಮ ಮೇಲೆ ವೃಥಾ ಸುಳ್ಳು ಆರೋಪದಲ್ಲಿ ತೊಡಗಿದ್ದಾರೆ. ಆದರೆ ಇಂತಹ ಸುಳ್ಳು ಕ್ಷಣಿಕ ಎಂದವರು ಬಿಜೆಪಿ ವಿರುದ್ದ ಹರಿಹಾಯ್ದರು.
ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಮಾತನಾಡಿ, ಬದ್ದತೆ ಎಂಬುದು ಬಿಜೆಪಿಯವರಿಗೆ ಇರುವುದೇ ಆದಲ್ಲಿ ತನಿಖೆಯ ಸವಾಲು ಸ್ವೀಕರಿಸಲಿ. ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಎಲ್ಲಾ ಹಗರಣಗಳ ತನಿಖೆ ನಡೆಯಲಿ ಎಂದು ಸವಾಲೆಸೆದರು.