ಹರಿಯಾಣ, ಜ 25 (DaijiworldNews/DB): ವಾರ್ಷಿಕ 40 ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದರೂ, ದಿನಕ್ಕೆ ಕೇವಲ ಎಂಟು ನಿಮಿಷ ಕೆಲಸ ಇರುತ್ತದೆ. ಹೀಗಾಗಿ ನನ್ನನ್ನು ಮುಖ್ಯಮಂತ್ರಿ ಕಚೇರಿಗೆ ವರ್ಗಾಯಿಸಿ ಎಂಬುದಾಗಿ ಐಎಎಸ್ ಅಧಿಕಾರಿಯೊಬ್ಬರು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೆ!
ಹಿರಿಯ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಅವರೇ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರಿಗೆ ಪತ್ರ ಬರೆದವರು. ಸದ್ಯ ತನಗೆ ಹರ್ಯಾಣದಲ್ಲಿ ರಾಜ್ಯ ವಿಜಿಲೆನ್ಸ್ ವಿಭಾಗದ ಮುಖ್ಯಸ್ಥರಾಗಿ ಪೋಸ್ಟಿಂಗ್ ನೀಡುವಂತೆ ಸಿಎಂ ಬಳಿ ಮನವಿ ಮಾಡಿದ್ದಾರೆ. ಖೇಮ್ಕಾ ಅವರು ಜನವರಿ 23ರಂದು ಸಿಎಂಗೆ ಪತ್ರ ಬರೆದಿದ್ದರೂ, ಈವರೆಗೆ ಸಿಎಂ ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಇದೇ ಜನವರಿ 9ರಿಂದ ಖೇಮ್ಕಾ ಅವರಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ (ಆರ್ಕೈವ್ಸ್ ಇಲಾಖೆ) ಜವಾಬ್ದಾರಿ ಸಿಕ್ಕಿದೆ. ಆದರೆ ಪತ್ರಾಗಾರ ಇಲಾಖೆಯಲ್ಲಿ ದಿನಕ್ಕೆ ಅವರಿಗೆ ಕೇವಲ ಎಂಟು ನಿಮಿಷಗಳ ಕೆಲಸ ಸಿಗುತ್ತದೆ. ಆದರೆ ವಾರ್ಷಿಕವಾಗಿ ಅವರು 40 ಲಕ್ಷ ರೂ. ವೇತನ ಪಡೆಯುತ್ತಾರೆ. ಇಷ್ಟು ವೇತನ ಪಡೆಯುತ್ತಿದ್ದರೂ, ಕೇವಲ ಎಂಟು ನಿಮಿಷದ ಕೆಲಸ ಇರುವುದರಿಂದ ಖೇಮ್ಕಾ ಅವರು ಬೇಸರಗೊಂಡಿದ್ದಾರೆ. ಇದಕ್ಕಾಗಿ ಬೇರೆ ಪೋಸ್ಟಿಂಗ್ ನೀಡುವಂತೆ ಸಿಎಂಗೆ ಕೋರಿದ್ದಾರೆ.
ಇನ್ನು 'ಪಿಕೆ ಚಿನ್ನಸಾಮಿ ವರ್ಸಸ್ ತಮಿಳುನಾಡು ಸರ್ಕಾರ'ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನ 1987ರ ತೀರ್ಪನ್ನು ಉಲ್ಲೇಖಿಸಿರುವ ಅವರು, ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಕ್ಕೆ ಸ್ಥಾನಮಾನಕ್ಕೆ ಅನುಗುಣವಾಗಿ ಕೆಲಸ ಮಾಡಿಸಬೇಕು ಎಂದು ಸುಪ್ರೀಂ ಕೂಡಾ ಅಭಿಪ್ರಾಯಪಟ್ಟಿದೆ ಎಂದು ಹೇಳಿದ್ದಾರೆ.
2025ರಲ್ಲಿ ಸೇವಾ ನಿವೃತ್ತಿ ಪಡೆಯಲಿರುವ ಖೇಮ್ಕಾ, ಭ್ರಷ್ಟಾಚಾರದ ವಿರುದ್ದದ ಹೋರಾಟದಲ್ಲಿಯೂ ಮುಂದಿದ್ದಾರೆ ಎಂದು ತಿಳಿದು ಬಂದಿದೆ.