ಬೆಂಗಳೂರು, ಜ 25 (DaijiworldNews/DB): ವಿವಾದದಿಂದಲೇ ಸುದ್ದಿಯಾದ ಶಾರುಖ್ ಖಾನ್-ದೀಪಿಕಾ ಪಡುಕೋಣೆ ಅಭಿನಯದ ’ಪಠಾಣ್’ ಚಿತ್ರಕ್ಕೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಚಿತ್ರ ಬಿಡುಗಡೆಯ ಮುನ್ನವೇ ಸೋರಿಕೆಯಾಗಿದ್ದು, ಅಂತರ್ಜಾಲ ತಾಣಗಳಲ್ಲಿ ಲಭಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಜನವರಿ 25ರಂದು ಚಿತ್ರ ಬಿಡುಗಡೆಯಾಗಿದೆ. ಆದರೆ ಇದಕ್ಕೂ ಮುನ್ನ Filmyzilla ಮತ್ತು Filmy4wap ಎಂಬ ವೆಬ್ಸೈಟ್ಗಳಲ್ಲಿ ಪಠಾಣ್ ಚಿತ್ರವನ್ನು ಸೋರಿಕೆ ಮಾಡಲಾಗಿದೆ ಎಂದು ಹೇಳಲಾಗಿದೆ. ಪೈರಸಿ ಬಗ್ಗೆ ಈಗಾಗಲೇ ಚಿತ್ರ ತಂಡ ದೂರಿತ್ತರೂ, ಚಿತ್ರ ಬಿಡುಗಡೆಗೂ ಮುನ್ನವೇ ವೆಬ್ಸೈಟ್ಗಳಲ್ಲಿ ಅಕ್ರಮವಾಗಿ ಚಿತ್ರವನ್ನು ಸೋರಿಕೆ ಮಾಡಲಾಗಿದೆ. ಇದರಿಂದ ಚಿತ್ರ ತಂಡಕ್ಕೆ ಹಿನ್ನಡೆ ಉಂಟಾಗಲಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ.
ಚಿತ್ರವನ್ನು ಚಿತ್ರಮಂದಿರಗಳಲ್ಲೇ ನೋಡಿ ಸಹಕರಿಸಿ ಎಂಬುದಾಗಿ ವೀಕ್ಷಕರಿಗೆ ಚಿತ್ರ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲಂಸ್ ಇದೇ ವೇಳೆ ಮನವಿ ಮಾಡಿದೆ ಎಂದು ತಿಳಿದು ಬಂದಿದೆ. ಚಿತ್ರವನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿ ಆನ್ಲೈನ್ನಲ್ಲಿ ಹರಿಯ ಬಿಡುವಂತಹ ಕೆಲಸಗಳಿಗೆ ಕೈ ಹಾಕದಿರಿ ಎಂದು ಪ್ರೇಕ್ಷಕರಲ್ಲಿ ಸಂಸ್ಥೆ ಕೇಳಿ ಕೊಂಡಿದೆ. ಇನ್ನು ಇದೇ ವೇಳೆ ಚಿತ್ರ ದಾಖಲೆ ಬರೆದಿದ್ದು, ಬಿಡುಗಡೆಗೂ ಮುನ್ನವೇ ಐದು ಲಕ್ಷ ಟಿಕೆಟ್ಗಳು ಮಾರಾಟಗೊಂಡಿವೆ ಎಂದು ವರದಿಯಾಗಿದೆ.