ಬೆಂಗಳೂರು, ಜ 25 (DaijiworldNews/DB): ಮತದಾರರಿಗೆ ಆಮಿಷವೊಡ್ಡಿ ಚುನಾವಣಾ ಅಕ್ರಮ ಎಸಗಿದ್ದಾರೆಂದು ಆರೋಪಿಸಿ ಮುಖ್ಯಮಂತ್ರಿ ಸಹಿತ ಬಿಜೆಪಿ ನಾಯಕರ ವಿರುದ್ದ ಕಾಂಗ್ರೆಸ್ ನಾಯಕರು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ನೀಡಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತಿತರರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಿದ್ದಾರೆ.
ದೂರು ನೀಡಿದ ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್, ಸಿಎಂ ಬೊಮ್ಮಾಯಿ ಮತ್ತು ತಂಡ ಭ್ರಷ್ಟಾಚಾರದ ಪಿತಾಮಹ. 40% ಕಮಿಷನ್ ಮೂಲಕ ಸಾವಿರಾರು ಕೋಟಿ ಸಂಗ್ರಹಿಸಿದ್ದಾರೆ. ಇನ್ನು ಮತದಾರರಿಗೆ ಆಮಿಷವೊಡ್ಡಿ ಚುನಾವಣೆ ಗೆಲ್ಲುವುದು ಅವರ ತಂತ್ರವಾಗಿದೆ. ರಮೇಶ್ ಜಾರಕಿಹೊಳಿಯವರು ಒಂದು ಮತಕ್ಕೆ ಆರು ಸಾವಿರ ರೂ.ಗಳನ್ನು ನಿಗದಿಪಡಿಸಿರುವ ವೀಡಿಯೋ ಕೂಡಾ ನಮಗೆ ಲಭ್ಯವಾಗಿದೆ. ದಾಖಲೆ ಸಮೇತ ಪೊಲೀಸರಿಗೆ ದೂರು ಸಲ್ಲಿಸಿದ್ದೇವೆ ಎಂದಿದ್ದಾರೆ.
ಪೊಲೀಸರು ಬಿಜೆಪಿ ನಾಯಕರ ವಿರುದ್ದ ಐಪಿಸಿ ಸೆಕ್ಷನ್ 171(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಬೇಕು ಎಂದು ಇದೇ ವೇಳೆ ಅವರು ಒತ್ತಾಯಿಸಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಚುನಾವಣೆಯಲ್ಲಿ ಗೆಲುವು ಅಸಾಧ್ಯ ಎಂಬುದು ಈಗಾಗಲೇ ಬಿಜೆಪಿಯವರಿಗೆ ಗೊತ್ತಾಗಿದೆ. ಹೀಗಾಗಿ ಆಮಿಷವೊಡ್ಡಿ ಅಧಿಕಾರ ಪಡೆಯಲು ಮುಂದಾಗಿದ್ದಾರೆ. 30 ಸಾವಿರ ಕೋಟಿ ರೂ. ಖರ್ಚು ಮಾಡಿ ಚುನಾವಣೆ ಗೆಲ್ಲುವ ತಂತ್ರ ಹೂಡಿದ್ದಾರೆ. ಪ್ರಜಾಪ್ರಭುತ್ವವನ್ನು ಸೋಲಿಸುವುದೇ ಅವರ ಗುರಿಯಾಗಿದೆ ಎಂದಿದ್ದಾರೆ.
ಇನ್ನು ಕಾಂಗ್ರೆಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿರುವ ಸಿಎಂ ಬೊಮ್ಮಾಯಿ, ಭ್ರಷ್ಟಾಚಾರ ಕಾಂಗ್ರೆಸ್ನಿಂದ ಹುಟ್ಟಿದೆ. ನಮಗೆ ಅವರ ಪಾಠ ಅನಗತ್ಯ. ಎರಡು ಸಾವಿರ ರೂ.ಗಳನ್ನು ನೀಡುವುದಾಗಿ ಆ ಪಕ್ಷ ಮುಕ್ತವಾಗಿ ಹೇಳಿಕೊಂಡಿರುವುದೇ ಅದರ ಅಸ್ತಿತ್ವ ಎಲ್ಲಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದರು.