ಗೋಧ್ರಾ(ಗುಜರಾತ್), ಜ 25 (DaijiworldNews/DB): 17 ಮಂದಿಯ ಸಾವಿಗೆ ಕಾರಣವಾಗಿದ್ದ 2002ರ ಗೋಧ್ರೋತ್ತರ ಕೋಮು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ನ್ಯಾಯಾಲಯವು 22 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ಬುಧವಾರ ಆದೇಶಿಸಿದೆ.
ಗೋಧ್ರಾ ಹತ್ಯಾಕಾಂಡದ ನಂತರ ಅಲ್ಪಸಂಖ್ಯಾತ ಸಮುದಾಯದ 17 ಮಂದಿಯನ್ನು ಸುಟ್ಟು ಹಾಕಿದ 2002ರ ಫೆಬ್ರವರಿ 28ರಂದು ನಡೆದ ಗೋಧ್ರೋತ್ತರ ಕೋಮು ಗಲಭೆ ಪ್ರಕರಣ ಸಂಬಂಧಿಸಿದಂತೆ ಸಾಕ್ಷ್ಯಾಧಾರದ ಕೊರತೆ ಹಿನ್ನೆಲೆಯಲ್ಲಿ ಆರೋಪಿಗಳಾದ 22 ಮಂದಿಯನ್ನು ಗುಜರಾತ್ನ ಪಂಚಮಹಲ್ ಜಿಲ್ಲೆಯ ಹಲೋಲ್ ನ್ಯಾಯಾಲಯವು ಖುಲಾಸೆಗೊಳಿಸಿದೆ. ಹೆಚ್ಚುವರಿ ಸೆಷನ್ಸ್ ಜಡ್ಜ್ ಹರ್ಷ ತ್ರಿವೇದಿ ಅವರು ಈ ಆದೇಶ ನೀಡಿದ್ದಾರೆ.
ಸಾಕ್ಷ್ಯನಾಶದ ಉದ್ದೇಶದಿಂದ ಇಬ್ಬರು ಮಕ್ಕಳು ಸಹಿತ 17 ಮಂದಿಯನ್ನು ಸುಟ್ಟು ಹಾಕಲಾಗಿತ್ತು ಎಂದು ಕೋರ್ಟ್ಗೆ ಪ್ರಾಸಿಕ್ಯೂಶನ್ ತಿಳಿಸಿದೆ. ಇನ್ನು ಆರೋಪಿಗಳಾಗಿದ್ದ ಎಂಟು ಮಂದಿ ವಿಚಾರಣಾ ಹಂತದಲ್ಲಿಯೇ ಸಾವನ್ನಪ್ಪಿದ್ದರು ಎಂದು ನ್ಯಾಯವಾದಿ ಗೋಪಾಲ್ ಸಿನ್ನಾ ಸೋಳಂಕಿ ತಿಳಿಸಿದ್ದಾರೆ.
2002ರ ಫೆಬ್ರವರಿ 27ರಂದು ಪಂಚಮಹಲ್ ಜಿಲ್ಲೆಯ ಗೋಧ್ರಾ ನಗರದ ಸಾಬರ್ಮತಿ ಎಕ್ಸ್ಪ್ರೆಸ್ ರೈಲಿನ ಬೋಗಿಗೆ ಬೆಂಕಿ ಹಚ್ಚಿದ ಪರಿಣಾಮ ಅದರಲ್ಲಿದ್ದ 59 ಮಂದಿ ಕರಸೇವಕರು ಜೀವಂತದಹನವಾಗಿದ್ದರು. ಇದರಿಂದಾಗಿ ಗುಜರಾತ್ನ ವಿವಿಧೆಡೆ ಕೋಮು ಗಲಭೆ ಭುಗಿಲೆದ್ದಿತ್ತು.