ಹಾವೇರಿ, ಜ 25 (DaijiworldNews/DB): ಅಲ್ಲಿ ಬಾಂಬ್ ಕುಕ್ಕರ್, ಇಲ್ಲಿ ಪ್ರೆಶರ್ ಕುಕ್ಕರ್. ಕಾಂಗ್ರೆಸ್ಸಿಗರಿಗೆ ಕುಕ್ಕರ್ ಎಂದರೆ ಬಹಳ ಪ್ರೀತಿ. ಕಾಂಗ್ರೆಸ್ ಎಂದರೇ ಪ್ರೆಶರ್ ಕುಕ್ಕರ್ ಪಕ್ಷ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಿರೇಕೆರೂರಿನ ಹೆಲಿಪ್ಯಾಡ್ನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಪ್ರೆಶರ್ ಕುಕ್ಕರ್ ಹಂಚಿ ಗೆಲ್ಲುವುದಕ್ಕೆ ನೋಡುವುದು ಅವರಿಗೆ ಸಾಮಾನ್ಯವಾಗಿದೆ ಎಂದರು.
ಬಿಜೆಪಿ ಕಾಂಗ್ರೆಸ್ ಒಂದೇ ಟೀಂ ಎಂಬುದಾಗಿ ಜೆಡಿಎಸ್ನವರು ಹೇಳುತ್ತಾರೆ, ಬಿಜೆಪಿ ಜೆಡಿಎಸ್ ಒಂದೇ ಟೀಂ ಎಂದು ಕಾಂಗ್ರೆಸ್ನವರು ಹೇಳುತ್ತಾರೆ. ಇನ್ನು ಎರಡೂ ಪಕ್ಷದವರು ನಾವು ಎ ಟೀಂ ಎಂದೂ ಹೇಳಿಕೊಳ್ಳುತ್ತಾರೆ. ಅವರು ಬಿ ಟೀಂ ಯಾವಾಗ ಆಗುತ್ತಾರೋ ಗೊತ್ತಿಲ್ಲ. ಆದರೆ ನಾವು ಎ, ಬಿ ಅಲ್ಲ, ಜನತೆಯ ಟೀಂ ಎಂದವರು ತಿಳಿಸಿದರು.
ಬಿಜೆಪಿ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂಬುದಾಗಿ ಕಾಂಗ್ರೆಸ್ಸಿಗರು ದೂರು ದಾಖಲಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸುಳ್ಳು ಮತ್ತು ರಾಜಕೀಯ ಪ್ರೇರಿತ ಆರೋಪಗಳ ಮೂಲಕ ಜನರ ದಾರಿ ತಪ್ಪಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂಬುದು ಜನರಿಗೂ ಗೊತ್ತಿದೆ. ದೇಶದ ಕಾನೂನಿನ ಪ್ರಕಾರವೇ ಎಲ್ಲವೂ ನಡೆಯುತ್ತದೆ ಎಂದರು.
ಕಾಂಗ್ರೆಸ್ ರಾಜಕೀಯವಾಗಿ ದಿವಾಳಿಯಾಗಿದೆ. ಅವರ ಶಾಸಕರು ಮತದಾರರಿಗೆ ಆಮಿಷ ಒಡ್ಡಿ ಸಿಕ್ಕಿ ಹಾಕಿಕೊಂಡಿರುವ ಬಗ್ಗೆ ಆ ಪಕ್ಷದ ನಾಯಕರು ತುಟಿ ಪಿಟಿಕ್ ಎನ್ನುವುದಿಲ್ಲ ಎಂದವರು ಇದೇ ವೇಳೆ ಹರಿಹಾಯ್ದರು.
ಬೊಮ್ಮಾಯಿ ಭ್ರಷ್ಟಾಚಾರದ ಪಿತಾಮಹ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ದೇಶದ ಮೊದಲ ಭ್ರಷ್ಟಾಚಾರವನ್ನು ಜೀಪ್ ಹಗರಣದ ಮೂಲಕ ಪ್ರಾರಂಭಿಸಿದ್ದೇ ಕಾಂಗ್ರೆಸ್. ಅದಕ್ಕಾಗಿ ಅಂದಿನ ರಕ್ಷಣಾ ಸಚಿವರು ರಾಜೀನಾಮೆ ನೀಡಿದ್ದರು. ಭ್ರಷ್ಟಾಚಾರ ಕಾಂಗ್ರೆಸ್ನ ಅವಿಭಾಜ್ಯ ಅಂಗವಾಗಿದೆ. ಇನ್ನು ಡಿ.ಕೆ. ಶಿವಕುಮಾರ್ ಅವರಷ್ಟು ಸ್ವಚ್ಛ ಮನುಷ್ಯ ರಾಜಕೀಯದಲ್ಲಿ ಯಾರೂ ಇಲ್ಲ ಎಂದು ಲೇವಡಿ ಮಾಡಿದರು.