ನವದೆಹಲಿ, ಜ 25 (DaijiworldNews/HR): ಈ ವರ್ಷ ಭಾರತವು ತನ್ನ ಜಿ -20 ಅಧ್ಯಕ್ಷೀಯ ಸಮಯದಲ್ಲಿ ಈಜಿಪ್ಟ್ ಅನ್ನು ಅತಿಥಿ ದೇಶವಾಗಿ ಆಹ್ವಾನಿಸಿದೆ, ಇದು ನಮ್ಮ ವಿಶೇಷ ಸ್ನೇಹವನ್ನ ಪ್ರತಿಬಿಂಬಿಸುತ್ತದೆ. ನಮ್ಮ ರಕ್ಷಣಾ ಉದ್ಯಮಗಳ ನಡುವಿನ ಸಹಕಾರವನ್ನ ಮತ್ತಷ್ಟು ಬಲಪಡಿಸಲು, ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ಗುಪ್ತಚರ ವಿನಿಮಯವನ್ನ ಹೆಚ್ಚಿಸಲು ನಾವು ಇಂದು ನಿರ್ಧರಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗಣರಾಜ್ಯೋತ್ಸವ ಪರೇಡ್'ನಲ್ಲಿ ಮುಖ್ಯ ಅತಿಥಿಯಾಗಿದ್ದ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಎಲ್-ಸಿಸಿ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದು, ದೆಹಲಿಯಲ್ಲಿ ಈಜಿಪ್ಟ್ ಅಧ್ಯಕ್ಷರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೋದಿ, 'ಭಾರತ ಮತ್ತು ಈಜಿಪ್ಟ್ ವಿಶ್ವದ ಅತ್ಯಂತ ಹಳೆಯ ನಾಗರಿಕತೆಗಳಲ್ಲಿ ಒಂದಾಗಿದೆ' ಎಂದರು.
ಭಾರತ-ಈಜಿಪ್ಟ್ ರಾಜತಾಂತ್ರಿಕ ಸಂಬಂಧದ 75ನೇ ವರ್ಷಾಚರಣೆ ಅಂಗವಾಗಿ ಉಭಯ ನಾಯಕರ ಉಪಸ್ಥಿತಿಯಲ್ಲಿ ಅಂಚೆ ಚೀಟಿಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು. ಇದರೊಂದಿಗೆ, ಸೈಬರ್ ಭದ್ರತೆ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಸಿಇಆರ್ಟಿ ಇಂಡಿಯಾ ಮತ್ತು ಸಿಇಆರ್ಟಿ ಈಜಿಪ್ಟ್ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.