ನವದೆಹಲಿ, ಜ 25( DaijiworldNews/MS): ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಬಿಡುಗಡೆ ಮಾಡುವ ಪ್ರಕ್ರಿಯೆ ಆರಂಭವಾಗಿದ್ದು ಅದರ ಮೊದಲ ಹೆಜ್ಜೆಯಾಗಿ, ಗಣರಾಜ್ಯೋತ್ಸವ ದಿನವಾದ ನಾಳೆ ಕನ್ನ್ಡ ಸೇರಿದಂತೆ ಮತ್ತಿತರ ಪ್ರಾದೇಶಿಕ ಭಾಷೆಗಳಲ್ಲಿ ಸುಪ್ರೀಂ ಕೋರ್ಟ್ನ 1,091 ತೀರ್ಪುಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಬುಧವಾರ ಹೇಳಿದರು.
ಸಿಜೆಐ ಚಂದ್ರಚೂಡ್ ಅವರು ಇಂದು ಬೆಳಿಗ್ಗೆ ಮುಕ್ತ ನ್ಯಾಯಾಲಯದಲ್ಲಿ ಈ ವಿಚಾರವನ್ನು ವಕೀಲರಿಗೆ ತಿಳಿಸಿದರು.
ತೀರ್ಪುಗಳನ್ನು ಸ್ಥಳೀಯ ಭಾಷೆಗಳಲ್ಲಿ ದೊರೆಯುವಂತೆ ಮಾಡುವ ಯೋಜನೆಯ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. “ವಕೀಲ ವರ್ಗ ತಾವು ಬಳಸುವ ಯಾವುದೇ ಭಾಷೆಯಲ್ಲಿ ಇವುಗಳನ್ನು ಉಪಯೋಗಿಸಿಕೊಳ್ಳಬೇಕೆಂಬುದು ನಮ್ಮ ಉದ್ದೇಶ. ತೀರ್ಪುಗಳು ಒಡಿಯಾ, ಗಾರೋ (ಸೈನೋ- ಟಿಬೆಟಿಯನ್ ಭಾಷೆ) ಮತ್ತಿತರ ಪ್ರಾದೇಶಿಕ ನುಡಿಗಳಲ್ಲಿ ಲಭ್ಯವಾಗಲಿವೆ” ಎಂದು ಅವರು ಹೇಳಿದರು.
"ಇ–ಎಸ್ಸಿಆರ್ ಯೋಜನೆಯಡಿ ಸದ್ಯ ಸುಮಾರು 34 ಸಾವಿರ ತೀರ್ಪುಗಳನ್ನು ಕ್ರೋಡೀಕರಿಸಲಾಗಿದೆ. ಜೊತೆಗೆ 1,091 ತೀರ್ಪುಗಳು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯ ಇದ್ದು, ಇವು ಗುರುವಾರದಿಂದ ಎಲ್ಲರಿಗೂ ದೊರೆಯುತ್ತವೆ. ಕನ್ನಡದಲ್ಲಿ 17, ಒಡಿಯಾದಲ್ಲಿ 21, ಮರಾಠಿಯಲ್ಲಿ 14, ಅಸ್ಸಾಮಿಯಲ್ಲಿ 4, ಮಲೆಯಾಳದಲ್ಲಿ 29, ನೇಪಾಳಿಯಲ್ಲಿ 3, ಪಂಜಾಬಿಯಲ್ಲಿ 4, ತೆಲುಗಿನಲ್ಲಿ 28, ಉರ್ದುವಿನಲ್ಲಿ 3 ಹಾಗೂ ತಮಿಳಿನಲ್ಲಿ 52 ತೀರ್ಪುಗಳು ಈಗಾಗಲೇ ಲಭ್ಯ ಇವೆ" ಎಂದು ಅವರು ಹೇಳಿದರು.