ರಾಯಚೂರು, ಜ 25 (DaijiworldNews/DB): ಭವಾನಿ ರೇವಣ್ಣ ಅಭ್ಯರ್ಥಿಯಾಗುವ ಅನಿವಾರ್ಯತೆ ಎದುರಾಗಿಲ್ಲ. ಹಾಗಿದ್ದಲ್ಲಿ ನಾವೇ ಅವರನ್ನು ಅಭ್ಯರ್ಥಿ ಮಾಡುತ್ತಿದ್ದೆವು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಹಾಸನ ವಿಧಾನಸಭಾ ಕ್ಷೇತ್ರದಿಂದ ತಾನೇ ಜೆಡಿಎಸ್ ಅಭ್ಯರ್ಥಿ ಎಂದು ಭವಾನಿ ರೇವಣ್ಣ ಸ್ವಯಂ ಘೋಷಣೆ ಮಾಡಿದ ಬೆನ್ನಲ್ಲೇ ಬುಧವಾರ ಪ್ರತಿಕ್ರಿಯಿಸಿದ ಎಚ್ಡಿಕೆ, ಪಕ್ಷದ ಮಾನ ಕಾಪಾಡುವ ಸಲುವಾಗಿ ಅನಿತಾ ಕುಮಾರಸ್ವಾಮಿ ಅವರನ್ನು ನಾನು ಅಂದು ಚುನಾವಣೆಗೆ ನಿಲ್ಲಿಸಿದ್ದೆ. ಸದ್ಯ ಹಾಸನಕ್ಕೆ ಸಮರ್ಥ ಅಭ್ಯರ್ಥಿ ಇದ್ದಾರೆ ಎಂದು ಸ್ಪಷ್ಟಪಡಿಸಿದರು.
ಅನಿವಾರ್ಯತೆ ಎದುರಾಗಿದ್ದರೆ ಖಂಡಿತಾ ಭವಾನಿ ರೇವಣ್ಣ ಅವರನ್ನು ಅಭ್ಯರ್ಥಿ ಮಾಡುತ್ತಿದ್ದೆವು. ಆದರೆ ಈಗ ಹಾಸನಕ್ಕೆ ಸಮರ್ಥ ಅಭ್ಯರ್ಥಿ ಇರುವುದರಿಂದ ಅಂತಹ ಅನಿವಾರ್ಯತೆ ಎದುರಾಗಿಲ್ಲ. ಯಾರೂ ಗೊಂದಲಕ್ಕೆ ಒಳಗಾಗಬೇಡಿ ಎಂದವರು ತಿಳಿಸಿದರು.
ಚುನಾವಣೆಗೆ ನಿಲ್ಲುವ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ಆದರೆ ಕುಟುಂಬ ರಾಜಕೀಯ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತಿದ್ದೇನೆ ಎಂದರು.
ಹಾಸನದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ್ದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಭವಾನಿ ರೇವಣ್ಣ, ಹಾಸನದಲ್ಲಿ ನಾನೇ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ. ಈ ಬಗ್ಗೆ ಈಗಾಗಲೇ ಮಾತುಕತೆ ಆಗಿದ್ದು, ಶೀಘ್ರ ಬಿಡುಗಡೆಯಾಗಲಿರುವ ಪಟ್ಟಿಯಲ್ಲಿ ನನ್ನ ಹೆಸರಿರಲಿದೆ ಎಂದಿದ್ದರು.