ಬೆಂಗಳೂರು, ಜ 26 (DaijiworldNews/DB): ಜನರ ಕಷ್ಟಕ್ಕೆ ಸಹಕರಿಸಲು ಉದಾತ್ತ ಕಾರ್ಯ ನೆರವೇರಿಸಬಹುದಾದ ರಾಮರಾಜ್ಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡುವಂತೆ ಪೇಜಾವರ ಮಠದ ಶ್ರೀಗಳು ಮತ್ತು ರಾಮ ಜನ್ಮಭೂಮಿ ಟ್ರಸ್ಟ್ನ ಸದಸ್ಯರಾದ ಶ್ರೀ ವಿಶ್ವಪ್ರಸನ್ನ ತೀರ್ಥರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ವರ್ಷ ಐದು ಲಕ್ಷ ರೂ. ಖರ್ಚು ಮಾಡುವ ಸಾಮರ್ಥ್ಯವನ್ನು ಯಾರೇ ಹೊಂದಿದ್ದರೂ, ಅದನ್ನು ಭಗವಾನ್ ರಾಮನ ಹೆಸರಿನಲ್ಲಿ ಜನರ ಕಷ್ಟಕ್ಕೆ ಸ್ಪಂದಿಸಲು ಪ್ರಯತ್ನಿಸಬೇಕು. ಸೂರಿಲ್ಲದವರಿಗೆ ಸೂರು ಕಲ್ಪಿಸುವುದು, ಬಡ ಮಕ್ಕಳಿಗೆ ಉಚಿತ ಶಿಕ್ಷಣ, ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ, ಶುಲ್ಕರಹಿತ ನ್ಯಾಯ ದೊರಕಿಸಿಕೊಡುವುದು ಹೀಗೆ ವಿವಿಧ ರೀತಿಯಲ್ಲಿ ಜನರ ಕಷ್ಟಕ್ಕೆ ಸ್ಪಂದಿಸಬಹುದು. ನಾನಾ ವೃತ್ತಿಯಲ್ಲಿರುವವರು ತಮ್ಮ ವೃತ್ತಿಗನುಗುಣವಾಗಿ ಈ ಸೇವೆಗಳನ್ನು ಮಾಡಬಹುದು ಎಂದು ಅವರು ಪ್ರತಿಪಾದಿಸಿದರು.
ರಾಮಭಕ್ತಿಗೂ ದೇಶಭಕ್ತಿಗೂ ವ್ಯತ್ಯಾಸವಿಲ್ಲ. ಅವೆರಡೂ ಒಂದೇ. ರಾಮರಾಜ್ಯ ಅಪ್ಲಿಕೇಶನ್ ಅಭಿವೃದ್ದಿಪಡಿಸಿ ಅದರಲ್ಲಿ ನಾವು ಮಾಡಿದ ಉದಾತ್ತ ಕಾರ್ಯಗಳನ್ನು ಫೀಡ್ ಮಾಡಿ ಆ ಮೂಲಕ ದೇಶಭಕ್ತಿ, ರಾಮಭಕ್ತಿಯನ್ನು ತೋರಿಸಬಹುದು ಎಂದವರು ಇದೇ ವೇಳೆ ನುಡಿದರು.