ನವದೆಹಲಿ, ಜ 26 (DaijiworldNews/DB): ದೆಹಲಿಯಲ್ಲಿ ನಡೆದ 74ನೇ ಗಣರಾಜ್ಯೋತ್ಸವ ಪರೇಡ್ನಲ್ಲಿ ವಿವಿಧ ರಾಜ್ಯಗಳ ಸಂಸ್ಕೃತಿ, ಪರಂಪರೆಗಳನ್ನು ಬಿಂಬಿಸುವ ಸ್ತಬ್ರಚಿತ್ರಗಳ ಪ್ರದರ್ಶನ ನಡೆಯಿತು. ಕರ್ನಾಟಕದ ನಾರೀಶಕ್ತಿಯನ್ನು ಬಿಂಬಿಸುವ ಸ್ತಬ್ದಚಿತ್ರ ಎಲ್ಲರ ಗಮನ ಸೆಳೆಯಿತು.
ದೇಶಾದ್ಯಂತ ಇಂದು 74ನೇ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಿದ ಸ್ತಬ್ದಚಿತ್ರಗಳು ಆಕರ್ಷಕವಾಗಿದ್ದವು. ವಿವಿಧ ರಾಜ್ಯಗಳು ತಮ್ಮ ರಾಜ್ಯದ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಸ್ತಬ್ದಚಿತ್ರಗಳನ್ನು ಪ್ರದರ್ಶಿಸಿದರು.
ಕರ್ನಾಟಕದಿಂದ ನಾರಿಶಕ್ತಿ ಸ್ತಬ್ದಚಿತ್ರದ ಪ್ರದರ್ಶನ ನಡೆಯಿತು. ಇದರಲ್ಲಿ ಸಾವಿರಾರು ಮಂದಿಗೆ ಹೆರಿಗೆ ಮಾಡಿಸಿದ ಸೂಲಗಿತ್ತಿ ನರಸಮ್ಮ, ವನಸಿರಿ ಬೆಳೆಸಲು ಶ್ರಮಿಸಿದ ತುಳಸಿ ಗೌಡ ಹಾಲಕ್ಕಿ ಹಾಗೂ ಮರಗಳನ್ನು ಮಕ್ಕಳಂತೆ ಬೆಳೆಸಿ ಪೋಷಿಸಿದ ವೃಕ್ಷ ಮಾತೆಸಾಲುಮರದ ತಿಮ್ಮಕ್ಕ ಅವರ ಪ್ರತಿರೂಪವನ್ನು ಪ್ರದರ್ಶಿಸಲಾಯಿತು. ಆ ಮೂಲಕ ಮೂವರು ನಾರಿಯರು ಸಮಾಜ, ಪ್ರಕೃತಿಗೆ ನೀಡಿದ ನಿಸ್ವಾರ್ಥ ಸೇವೆಗೆ ಗೌರವ ನೀಡುವ ಪ್ರಯತ್ನ ನಡೆಯಿತು.
ಕರ್ನಾಟಕದ ಟ್ಯಾಬ್ಲೋ ರಾಜ್ಯದ 3 ಮಹಿಳಾ ಸಾಧಕರ ಅಸಾಧಾರಣ ಸಾಧನೆಗಳನ್ನು ಸಾಂಕೇತಿಕವಾಗಿ ಅನಾವರಣಗೊಳಿಸುವ ಮೂಲಕ ನೆರೆದವರ ಮನಸೂರೆಗೊಳಿಸಿತು.