ಕೊಹಿಮಾ, ಜ 26 (DaijiworldNews/DB): ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆ ಸಂಬಂಧ ಎಎಪಿಯು ಯಾವುದೇ ಪಕ್ಷದೊಂದಿಗೂ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವುದಿಲ್ಲ. ಸಾಧ್ಯವಾದಷ್ಟು ಕ್ಷೇತ್ರಗಳಲ್ಲಿ ಪಕ್ಷ ಸ್ಪರ್ಧೆ ನಡೆಸಲಿದೆ ಎಂದು ಆಮ್ ಆದ್ಮಿ ಪಕ್ಷದ ಈಶಾನ್ಯ ಉಸ್ತುವಾರಿ ರಾಜೇಶ್ ಶರ್ಮಾ ಹೇಳಿದ್ದಾರೆ.
ಕೊಹಿಮಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆಬ್ರವರಿ 27ರಂದು ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆ ನಡೆಯಲಿದ್ದು, 60 ಸದಸ್ಯಬಲದ ಕ್ಷೇತ್ರಗಳಲ್ಲಿ ಎಎಪಿ ಸಾಧ್ಯವಾದಷ್ಟು ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸಲಿದೆ. ಯಾವುದೇ ಪಕ್ಷದೊಂದಿಗೆ ನಾವು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದರು.
ಎಎಪಿಯ ನಾಗಾಲ್ಯಾಂಡ್ ಘಟಕದ ಅಧ್ಯಕ್ಷರನ್ನಾಗಿ ಮಾಜಿ ಶಾಸಕ ಆಸು ಕೀಹೋ ಅವರನ್ನು ನೇಮಿಸಲಾಗಿದೆ. ಪ್ರಾಮಾಣಿಕ ಜನಸೇವೆ, ದಕ್ಷ ಆಡಳಿತ ಮತ್ತು ಭ್ರಷ್ಟಾಚಾರ ನಿರ್ಮೂಲನೆ ಮತ್ತು ರಾಜ್ಯದ ಒಟ್ಟು ಅಭಿವೃದ್ದಿಗಾಗಿ ನಾಗಾಲ್ಯಾಂಡ್ ಜನರು ಮತ ನೀಡುವ ಸಮಯ ಇದೀಗ ಬಂದಿದೆ. ಪಕ್ಷವು ಎಲ್ಲಾ ಹಂತದ ಜನರನ್ನೂ ತಲುಪಲಿದೆ ಎಂದು ತಿಳಿಸಿದರು.
ನಾಗಾಲ್ಯಾಂಡ್ ಜನರು ಎಎಪಿ ಸರ್ಕಾರವನ್ನೇ ಬಯಸುತ್ತಿದ್ದಾರೆ. ದೆಹಲಿಯಲ್ಲಿರುವ ಇಲ್ಲಿನ ಜನರು ಓದು ಅಥವಾ ಕೆಲಸ ಎಲ್ಲಾ ವಿಷಯದಲ್ಲಿಯೂ ಉತ್ತಮ ಆಡಳಿತ ಮತ್ತು ಭರವಸೆಗಳಿಗೆ ಸಾಕ್ಷಿಯಾಗಿದ್ದಾರೆ. ಹೀಗಾಗಿ ಅವರದೇ ರಾಜ್ಯದಲ್ಲಿ ಅಂತಹ ಆಡಳಿತವನ್ನು ಅವರು ಅಪೇಕ್ಷಿಸುತ್ತಿದ್ದಾರೆ ಎಂದು ಇದೇ ವೇಳೆ ಅಭಿಪ್ರಾಯಪಟ್ಟರು.