ಬೆಂಗಳೂರು, ಜ 26( DaijiworldNews/MS): ರಾಜ್ಯದ ಜನರು ಕಾಂಗ್ರೆಸ್ ಯಾತ್ರೆಯನ್ನು ತಿರಸ್ಕರಿಸಿದ್ದಾರೆ, ಕರ್ನಾಟಕದಲ್ಲೂ ಕೈ ಪಕ್ಷ ಕೊನೆ ಉಸಿರೆಳೆಯುತ್ತಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಈ ಬಗ್ಗೆ ಬಿಜೆಪಿ ಸರಣಿ ಟ್ವೀಟ್ ಮಾಡಿ, "ಅಲ್ಪಸಂಖ್ಯಾತರ ರಕ್ಷಕ, ಭ್ರಷ್ಟಾಚಾರ ವಿರೋಧಿ, ದಲಿತ ಪರ ಎಂದೆಲ್ಲ ಹೋದಲ್ಲೆಲ್ಲಾ ಸುಳ್ಳನ್ನೇ ಊದಿ, ಊರೂರು ತಿರುಗಿ ಯಾತ್ರೆ ಮಾಡಿದರೂ ನಿಮಗೆ ಎದುರಾಗುವುದು ಖಾಲಿ ಕುರ್ಚಿಗಳೇ. ಜನರು ನಿಮ್ಮ ಯಾತ್ರೆಯನ್ನು ತಿರಸ್ಕರಿಸಿದ್ದಾರೆ . ಅಧಿಕಾರದಲ್ಲಿದ್ದಾಗ ಮಾಡಿದ ಹಗರಣಗಳು ಹೊರಬರಬಾರದು ಎಂದು ಲೋಕಾಯುಕ್ತವನ್ನೇ ಮುಚ್ಚಿದವರು ನೀವು. ಜನತೆ ಎಲ್ಲವನ್ನೂ ನೋಡಿದ್ದಾರೆ. ಆಗ ಮಾಡಿದ ಪಾಪಗಳು ಯಾವ ಯಾತ್ರೆಯಿಂದಲೂ ಪರಿಹಾರವಾಗದು ಟೀಕಿಸಿದೆ.
ಕೆರೆಗಳನ್ನು ನುಂಗಿ ನೀರು ಕುಡಿದಿದ್ದಾಯ್ತು, ಧರ್ಮಗಳ ನಡುವೆ ಬಿರುಕು ತಂದಿದ್ದಾಯ್ತು, ಬೆಟ್ಟ, ಗುಡ್ಡಗಳನ್ನು ಅಗೆದು ಸಂಪತ್ತು ಕೊಳ್ಳೆ ಹೊಡೆದಿದ್ದಾಯ್ತು, ಗೂಂಡಾಗಿರಿ ಮಾಡಿದ್ದಾಯ್ತು, ಸಾಧ್ಯವಾದಲ್ಲೆಲ್ಲ ಅಕ್ರಮ ಎಸಗಿದ್ದಾಯ್ತು. ಇನ್ನೂ ಯಾವ ಮುಖ ಇಟ್ಕೊಂಡು ಜನರ ಬಳಿ ಹೋಗಿದ್ದೀರಿ ಎಂದು ಕೇಳಿದೆ
ಅಭಿವೃದ್ಧಿಯ ಹೆಸರಿನಲ್ಲಿ ಮತ ಕೇಳುವ ನೈತಿಕತೆ ಇಲ್ಲದವರೇ ಓಲೈಕೆ ರಾಜಕಾರಣಕ್ಕಿಳಿಯುವುದು. ಮಂದಿರವೆಂದರೆ ಅಲರ್ಜಿ, ಮಸೀದಿಯೆಂದರೆ ಆಸಕ್ತಿ ತೋರುವ ಊಸರವಳ್ಳಿಗಳೇ ತುಂಬಿರುವ ಪಕ್ಷವು ಪ್ರಜೆಗಳ ಧ್ವನಿಯಾಗಲು ಸಾಧ್ಯವೆ? . ಇತ್ತೀಚೆಗೆ ಕೈ ನಾಯಕರು ಖಾಲಿ ಕುರ್ಚಿಗಳಿಗೆ ಭಾಷಣ ಮಾಡುವ ಕಲೆಯನ್ನು ರೂಢಿಸಿಕೊಂಡಿದ್ದಾರೆ. ಈಗಾಗಲೇ ದೇಶದೆಲ್ಲೆಡೆ ಅಪ್ರಸ್ತುತವಾಗಿರುವ ಕಾಂಗ್ರೆಸ್ ಈಗ ಕರ್ನಾಟಕದಲ್ಲೂ ಕೊನೆ ಉಸಿರೆಳೆಯುತ್ತಿದೆ. ಪ್ರಜಾದ್ರೋಹ ಮಾಡಿದ್ದರ ಫಲ ಇದು ಎಂದು ಬಿಜೆಪಿ ಹೇಳಿದೆ.