ಬೆಂಗಳೂರು, ಜ 26 (DaijiworldNews/HR): 10.34 ಲಕ್ಷ ರೂ. ಮೌಲ್ಯದ ಖೋಟಾ-ನೋಟು ಚಲಾವಣೆಗೆ ಯತ್ನಿಸುತ್ತಿದ್ದ ಆಂಧ್ರ ಮೂಲದ ನಾಲ್ವರ ಗ್ಯಾಂಗ್ ಸುಬ್ರಹ್ಮಣ್ಯಪುರ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.
ಬಂಧಿತರನ್ನು ಆಂಧ್ರಪ್ರದೇಶ ಕಡಪ ಜಿಲ್ಲೆಯ ಚರಣ್ ಸಿಂಗ್, ಪುಲ್ಲಲರೇವು ರಾಜ, ರಜನಿ, ಗೋಪಿನಾಥ್ ಎಂದು ಗುರುತಿಸಲಾಗಿದೆ.
500 ರೂ. ಮುಖಬೆಲೆಯ 1 ಅಸಲಿ ನೋಟು ಕೊಟ್ಟರೆ ಆರೋಪಿಗಳು 3 ನಕಲಿ ನೋಟು ಕೊಡುತ್ತಿದ್ದರು. ಈ ಬಗ್ಗೆ ಬಂದ ಖಚಿತ ಮಾಹಿತಿಮೇರೆಗೆ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ದಾಳಿ ನಡೆಸಿ ಚರಣ್ ಹಾಗೂ ರಜನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಅವರ ವಾಹನ ತಪಾಸಣೆ ನಡೆಸಿದಾಗ ಅದರಲ್ಲಿ 500 ರೂ. ಮುಖಬೆಲೆಯ 4.9 ಲಕ್ಷ ರೂ. ಮೌಲ್ಯದ 818 ಖೋಟಾ ನೋಟು ಪತ್ತೆಯಾಗಿತ್ತು.
ಇನ್ನು ಜ.19ರಂದು ಮಧ್ಯಾಹ್ನ ಉತ್ತರಹಳ್ಳಿ-ಕೆಂಗೇರಿ ಮುಖ್ಯರಸ್ತೆಯ ಪೂರ್ಣಪ್ರಜ್ಞಾ ಲೇಔಟ್ ಬಳಿ ಬೊಲೆರೊ ಜೀಪ್ನಲ್ಲಿಆರೋಪಿಗಳಾದ ಚರಣ್ ಹಾಗೂ ರಜಿನಿ ಖೋಟಾ ನೋಟು ಚಲಾವಣೆಗೆ ಯತ್ನಿಸುತ್ತಿದ್ದರು.
ಜ.20ರಂದು ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ವಶಕ್ಕೆ ಪಡೆದು ಹೆಚ್ಚಿನ ಇಚಾರಣೆಗೆ ಒಳಪಡಿಸಲಾಗಿತ್ತು. ಆ ವೇಳೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿರುವ ಬಾಡಿಗೆ ಮನೆಯೊಂದರಲ್ಲಿಕಂಪ್ಯೂಟರ್ ಸಹಾಯದಿಂದ ಅಸಲಿ ನೋಟಿನ ಮಾದರಿಯಲ್ಲೇ ನಕಲಿ ನೋಟಿನ ಚಿತ್ರ ತಯಾರಿಸುತ್ತಿದ್ದೆವು. ಅದನ್ನು ಪ್ರಿಂಟ್ ತೆಗೆದು ಚಲಾವಣೆ ಮಾಡಲು ಯತ್ನಿಸುತ್ತಿದ್ದೆವು ಎಂದು ಆರೋಪಿ ಚರಣ್ ಬಾಯ್ಬಿಟ್ಟಿದ್ದ.
ಈ ವಿಚಾರ ತಿಳಿದ ಪೊಲೀಸರು ತನಿಖೆಗಿಳಿದು ಚರಣ್ನನ್ನು ಕರೆದುಕೊಂಡು ಆಂಧ್ರದ ಅನಂತಪುರದಲ್ಲಿ ಆತ ಹೇಳಿದ ಬಾಡಿಗೆ ಮನೆಗೆ ಹೋಗಿದ್ದು, ಅಲ್ಲಿ ಇತರ ಆರೋಪಿಗಳಾದ ಪುಲ್ಲಲರೇವು ರಾಜ, ಗೋಪಿನಾಥ್ ಸಿಕ್ಕಿ ಬಿದ್ದಿದ್ದು, ಆತ ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ ಮನೆಯಲ್ಲಿ ಶೋಧಿಸಿದಾಗ 6.25 ಲಕ್ಷ ರೂ. ಖೋಟಾ ನೋಟು ಪತ್ತೆಯಾಗಿತ್ತು.
ಇನ್ನು ಇದುವರೆಗೆ ಒಟ್ಟು 14 ಲಕ್ಷ ರೂ. ಮೌಲ್ಯದ ನಕಲಿ ನೋಟುಗಳನ್ನು ಪ್ರಿಂಟ್ ಮಾಡಿದ್ದು, ಈ ಪೈಕಿ 3 ಲಕ್ಷ ರೂ. ಮೌಲ್ಯದ ಖೋಟಾ-ನೋಟು ಚಲಾವಣೆ ಮಾಡಿರುವುದಾಗಿ ಚರಣ್ ಒಪ್ಪಿಕೊಂಡಿರುವುದಾಗಿ ವರದಿಯಾಗಿದೆ.