ಚಾಮರಾಜನಗರ, ಜ 26 (DaijiworldNews/DB): ಮೋದಿ ಮೋಸ ಮಾಡಿರುವುದನ್ನು ಬಿಬಿಸಿ ಸಾಕ್ಷ್ಯಚಿತ್ರದಲ್ಲಿ ತೋರಿಸಿರಬಹುದು. ಹೀಗಾಗಿಯೇ ಅದಕ್ಕೆ ತಡೆ ಒಡ್ಡಿರಬಹುದು ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಕುಟುಕಿದ್ದಾರೆ.
2022ರ ಗುಜರಾತ್ ಗಲಭೆ ಘಟನೆಗಳಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ನೇರ ಪಾತ್ರ ಇದೆ ಎಂಬಂತೆ ಬಿಂಬಿಸಿ ಬಿಬಿಸಿ ಬಿಡುಗಡೆ ಮಾಡಿರುವ ಸಾಕ್ಷ್ಯಚಿತ್ರಕ್ಕೆ ತಡೆ ಒಡ್ಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಸಾಕ್ಷ್ಯಚಿತ್ರದ ವಿಚಾರವಾಗಿ ನನಗೆ ಗೊತ್ತಿಲ್ಲ. ಆದರೆ ಮೋದಿ ಸುಳ್ಳು ಹೇಳಿರುವ ಬಗ್ಗೆ, ಮೋಸ ಮಾಡಿರುವ ಬಗ್ಗೆ ಬಿಬಿಸಿ ಆ ಸಾಕ್ಷ್ಯಚಿತ್ರದಲ್ಲಿ ತೋರಿಸಿರಬಹುದು. ಬಹುಶಃ ಸಾಕ್ಷ್ಯಚಿತ್ರಕ್ಕೆ ಈ ಕಾರಣದಿಂದಲೇ ತಡೆ ಒಡ್ಡಿರಬಹುದು ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ಬಿಜೆಪಿ ಈ ಬಾರಿ ಅವಕಾಶ ಪಡೆದುಕೊಳ್ಳುವುದಿಲ್ಲ. ಆದರೆ ಸಿ.ಟಿ. ರವಿ ಬಿಜೆಪಿ ಅಧಿಕಾರಕ್ಕೆ ಮತ್ತೊಮ್ಮೆ ಏರಲಿದೆ ಎಂದು ಹಗಲುಗನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಸುಖಾಸುಮ್ಮನೆ ಉಚಿತ ಭಾಗ್ಯಗಳ ಘೋಷಣೆ ಮಾಡುತ್ತಿಲ್ಲ. ಅಧಿಕಾರಕ್ಕೆ ಬಂದಾಗ ಏನನ್ನು ಜನರಿಗೆ ನೀಡಲು ಸಾಧ್ಯವೋ ಅದನ್ನೇ ನಾವು ಹೇಳುತ್ತಿದ್ದೇವೆ. ಹೇಳಿದ್ದನ್ನು ಮಾಡಿ ತೋರಿಸುತ್ತೇವೆ ಎಂದು ಬಿಜೆಪಿ ಆರೋಪಗಳ ಕುರಿತು ಪ್ರತಿಕ್ರಿಯಿಸಿದರು.
ಕೋವಿಡ್-19 ಸಂದರ್ಭಗಳಲ್ಲಿ ಹಗರಣ ಮಾಡಿರುವುದು ಸಾಬೀತಾದರೆ ಸಾರ್ವಜನಿಕವಾಗಿ ನೇಣು ಹಾಕಿ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿಕೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸುಧಾಕರ್ ನೇಣು ಹಾಕಿಕೊಳ್ಳುವುದು ಬೇಡ. ಆರೋಗ್ಯ ಇಲಾಖೆ ಹಗರಣಗಳ ಬಗ್ಗೆ ತನಿಖೆಯಾಗಲಿ. ಆಗ ಆರೋಪಗಳೆಲ್ಲಾ ಸಾಬೀತಾಗುತ್ತವೆ ಎಂದರು.