ಕೇರಳ, ಜ 26 (DaijiworldNews/DB): ಪ್ರಧಾನಿ ನರೇಂದ್ರ ಮೋದಿಯವರ ಕುರಿತ ಬಿಬಿಸಿ ಸಾಕ್ಷ್ಯಚಿತ್ರವನ್ನು ತಿರುವನಂತಪುರಂನ ಶಾಂಘುಮುಖಂ ಬೀಚ್ನಲ್ಲಿ ಪ್ರದರ್ಶಿಸಲು ಕೇರಳ ಕಾಂಗ್ರೆಸ್ ಮುಂದಾಗಿದೆ.
ಸಾರ್ವಜನಿಕರಿಗೆ ಸಾಕ್ಷ್ಯಚಿತ್ರ ವೀಕ್ಷಿಸಲು ಅನುಕೂಲವಾಗುವ ಸ್ಥಳದ ಹಿನ್ನೆಲೆಯಲ್ಲಿ ಬೀಚ್ಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಕೇರಳ ರಾಜ್ಯ ಕಾಂಗ್ರೆಸ್ ತಿಳಿಸಿದೆ.
ಕಳೆದ ವಾರ ಬಿಡುಗಡೆಯಾಗಿದ್ದ ಸಾಕ್ಷ್ಯಚಿತ್ರ ವಿವಾದಗಳಿಂದಲೇ ಸುದ್ದಿಯಾಗಿದ್ದು, ಲಿಂಕ್ ಹಂಚಿಕೊಳ್ಳುವ ಯೂಟ್ಯೂಬ್ ವೀಡಿಯೋಗಳು ಮತ್ತು ಟ್ವಿಟರ್ ಪೋಸ್ಟ್ಗೆ ಕೇಂದ್ರ ನಿರ್ಬಂಧ ಹೇರಿತ್ತು. ಅಲ್ಲದೆ ಹೈದರಾಬಾದ್ ವಿಶ್ವವಿದ್ಯಾನಿಲಯ, ಜೆಎನ್ಯು ಮತ್ತು ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಪಂಜಾಬ್ ವಿಶ್ವವಿದ್ಯಾನಿಲಯ ಸೇರಿದಂತೆ ವಿವಿಧ ವಿವಿಗಳಲ್ಲಿ ವಿದ್ಯಾರ್ಥಿಗಳು ಸಾಕ್ಷ್ಯಚಿತ್ರ ಪ್ರದರ್ಶನ ಹಮ್ಮಿಕೊಂಡಿದ್ದರು. ಜೆಎನ್ಯು ಮತ್ತು ಜಾಮಿಯಾದಲ್ಲಿ ಪ್ರದರ್ಶನವೇಳೆ ನಡೆದ ಗದ್ದಲ ಹಿಂಸಾಚಾರಕ್ಕೂ ಕಾರಣವಾಗಿತ್ತು.
ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 2002ರಲ್ಲಿ ನಡೆದ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಈ ಸಾಕ್ಷ್ಯಚಿತ್ರದಲ್ಲಿ ತೋರಿಸಲಾಗಿತ್ತು. ಇದನ್ನು ತನಿಖೆ ಮಾಡಲಾಗಿದೆ ಎಂದು ಬಿಬಿಸಿ ಹೇಳಿದ್ದರೆ, ಕೇಂದ್ರ ಸರ್ಕಾರ ಇದನ್ನು ಪ್ರಚಾರದ ತುಣುಕು ಎಂದು ಜರೆದಿತ್ತು.