ಚೆನ್ನೈ, ಜ 26 (DaijiworldNews/DB): ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರಿಗೆ ಸಂಬಂಧಿಸಿದ ಕೆಲವು ಆಸ್ತಿಗಳನ್ನು ಹರಾಜು ಹಾಕಲು ನ್ಯಾಯಾಲಯ ಅನುಮತಿ ನೀಡಿದೆ.
ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಜಯಲಲಿತಾ ಮನೆಗೆ ದಾಳಿ ನಡೆಸಿದ್ದ ಅಧಿಕಾರಿಗಳು ದಾಖಲೆರಹಿತವಾಗಿ ಇರಿಸಲಾಗಿದ್ದ ಚಿನ್ನಾಭರಣ, ವಾಚ್, ಸೀರೆಗಳನ್ನು ವಶಪಡಿಸಿಕೊಂಡಿದ್ದರು. ಆದರೆ ಬಳಿಕ ಜಯಲಲಿತಾ ವಿಧಿವಶರಾದ ಹಿನ್ನೆಲೆಯಲ್ಲಿ ಈ ಎಲ್ಲಾ ಸೊತ್ತುಗಳು ಅಧಿಕಾರಿಗಳ ವಶದಲ್ಲಿಯೇ ಇತ್ತು. ಹೀಗಾಗಿ ಇವುಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸುವಂತೆ ಕೋರಿ ಆರ್ಟಿಐ ಕಾರ್ಯಕರ್ತರೊಬ್ಬರು ಸಿಟಿ ಸಿವಿಲ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯನ್ನು ಪರಿಶೀಲನೆ ನಡೆಸಿದ ನ್ಯಾಯಾಲಯವು ಜಯಲಲಿತಾ ಅವರಿಗೆ ಸಂಬಂಧಿಸಿದ ಕೆಲವು ಆಸ್ತಿಗಳನ್ನು ಹರಾಜು ಹಾಕಲು ಅನುಮತಿ ನೀಡಿದೆ. ಅಲ್ಲದೆ ಇದಕ್ಕಾಗಿ ಸೂಕ್ತ ಅಧಿಕಾರಿಯೊಬ್ಬರನ್ನು ನೇಮಿಸುವಂತೆ ಸೂಚನೆ ನೀಡಿದೆ. ಹರಾಜಿನಿಂದ ಬಂದ ಹಣದಲ್ಲಿ ಕರ್ನಾಟಕ ಸರ್ಕಾರ ಖರ್ಚು ಮಾಡಿದ್ದ 5 ಕೋಟಿಯನ್ನು ತನ್ನಲ್ಲೇ ಇರಿಸಿಕೊಂಡು ಉಳಿದ ಹಣವನ್ನು ತಮಿಳುನಾಡು ಸರ್ಕಾರಕ್ಕೆ ನೀಡುವಂತೆ ನಿರ್ದೇಶಿಸಿದೆ.