ನವದೆಹಲಿ, ಜ 26 (DaijiworldNews/SM): ಈಗಾಗಲೇ ಆರಂಭಗೊಂಡು ಸಮಾರೋಪಕ್ಕೆ ಹತ್ತಿರವಾಗಿರುವ ಭಾರತ್ ಜೋಡೋ ಯಾತ್ರೆ ಜನವರಿ 30 ರಂದು ಸಮಾರೋಪಗೊಳ್ಳಲಿದ್ದು, ಸಮಾರೋಪ ಸಮಾರಂಭದಲ್ಲಿ ಆಹ್ವಾನಿತ ನಿತೀಶ್ ಕುಮಾರ್ ಭಾಗವಹಿಸುವುದಿಲ್ಲ ಎಂದಿದ್ದಾರೆ.
ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಜನವರಿ 30 ರಂದು ನಡೆಯಲಿರುವ 'ಭಾರತ್ ಜೋಡೋ' ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ನಿತೀಶ್ ಕುಮಾರ್ ನೇತೃತ್ವದ ಜೆಡಿಯುಗೆ ಕಾಂಗ್ರೆಸ್ ಆಹ್ವಾನ ನೀಡಿದೆ. ಆದರೆ, ಈ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಜೆಡಿಯು ಅಧ್ಯಕ್ಷ ಲಾಲನ್ ಸಿಂಗ್ ಗುರುವಾರ ಹೇಳಿದ್ದಾರೆ.
ನಾಗಲ್ಯಾಂಡ್ ನಲ್ಲಿ ರಾಜಕೀಯ ಕಾರ್ಯಕ್ರಮ ಪೂರ್ವ ನಿಗದಿಯಾಗಿರುವುದರಿಂದ ಭಾರತ್ ಜೋಡೋ ಯಾತ್ರೆ ಸಮಾರೋಪದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸಿಂಗ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಈ ಸಮಯದಲ್ಲಿ ಪ್ರತಿಪಕ್ಷಗಳನ್ನು ಒಗ್ಗೂಡಿಸಬೇಕಾದ ಅನೀವಾರ್ಯವಿದ್ದು, ಈ ನಿಟ್ಟಿನಲ್ಲಿ ಕಾಂಗ್ರೆಸ್ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ಜೆಡಿಯುನ ಆಶಯವಾಗಿದೆ ಎಂದು ಸಿಂಗ್ ಹೇಳಿದ್ದಾರೆ.
2024 ರ ಲೋಕಸಭಾ ಚುನಾವಣೆ ಸಮಯದಲ್ಲಿ ಪಕ್ಷ ಸಂಘಟನೆಯನ್ನು ಪುನಶ್ಚೇತನಗೊಳಿಸುವ ಉದ್ದೇಶದಿಂದ ಆರಂಭಿಸಿದ ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಹಾಜರಾಗಲು ಬಿಜೆಪಿಯೇತರ ಹಲವು ಪಕ್ಷಗಳ ಮುಖ್ಯಸ್ಥರನ್ನು ಕಾಂಗ್ರೆಸ್ ಆಹ್ವಾನಿಸಿದೆಯಾದರೂ, ಅವುಗಳಲ್ಲಿ ಎಷ್ಟು ಮಂದಿ ಬರುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.