ನವದೆಹಲಿ, ಜ 26 (DaijiworldNews/SM): ಭಾರತ ಪಾಕಿಸ್ತಾನದ ನಡುವೆ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆಯೇ ಇದ್ದ ವೈಮನಸ್ಸು ಗೊತ್ತಿರುವ ವಿಚಾರ. ಈ ನಡುವೆ ಭಾರತದೊಂದಿಗೆ ಮಾತುಕತೆಗೆ ಪಾಕಿಸ್ತಾನ ವೇದಿಕೆ ಸಿದ್ದಪಡಿಸುತ್ತದೆ ಎನ್ನಲಾಗಿತ್ತು. ಆದರೆ, ಭಾರತದೊಂದಿಗೆ ಅನೌಪಚಾರಿಕ ಮಾತುಕತೆ ಇಲ್ಲ ಎಂದು ಪಾಕಿಸ್ತಾನ ಹೇಳಿದೆ.
ಈಗಿನ ಪರಿಸ್ಥಿತಿಯಲ್ಲಿ ಅಂತಹ ಯಾವುದೇ ಬೆಳವಣಿಗೆಗಳೂ ನಡೆಯುತ್ತಿಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆಯ ರಾಜ್ಯ ಖಾತೆ ಸಚಿವೆ ಹೀನಾ ರಬ್ಬಾನಿ ಖರ್ ಸೆನೆಟ್ ಗೆ ಮಾಹಿತಿ ನೀಡಿದ್ದಾರೆ. ಫಲಿತಾಂಶ-ಉದ್ದೇಶಿತವಾಗಿದ್ದಿದ್ದರೆ, ಅನೌಪಚಾರಿಕ ರಾಜತಾಂತ್ರಿಕತೆಗೆ ಅಪೇಕ್ಷಣೀಯವಾಗಿರುತ್ತಿತ್ತು ಎಂದು ವಿದೇಶಾಂಗ ಸಚಿವೆ ತಿಳಿಸಿದ್ದಾರೆ.
ಪ್ರತ್ಯೇಕವಾಗಿ ವಿದೇಶಾಂಗ ಕಚೇರಿ ವಕ್ತಾರೆ ಮುಮ್ತಾಜ್ ಝಹ್ರಾ ಬಲೂಚ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಸಚಿವೆ ಖರ್ ಅವರ ಹೇಳಿಕೆಯನ್ನು ಪುನರುಚ್ಛರಿಸಿದ್ದು, ಭಾರತದೊಂದಿಗೆ ರಹಸ್ಯ ಮಾತುಕತೆಗಳಿಲ್ಲ ಎಂದು ಹೇಳಿದ್ದಾರೆ. ಪ್ರದೇಶದಲ್ಲಿ ಶಾಂತಿ ನೆಲೆಸುವುದಕ್ಕೆ ಪಾಕಿಸ್ತಾನ ಎಂದಿಗೂ ಕ್ರಮಗಳನ್ನು ಕೈಗೊಂಡಿದೆ ಎಂದಿದ್ದಾರೆ.