ಬೆಂಗಳೂರು, ಜ 26( DaijiworldNews/MS): ಖಾದಿಗೆ ಉತ್ತಮ ಭವಿಷ್ಯವಿದೆ. ಯಾರು ಭಯ ಪಡುವ ಅವಶ್ಯಕತೆ ಇಲ್ಲ. ಈ ಬಾರಿಯ ಬಜೆಟ್ನಲ್ಲಿ ದುಡಿಯುವ ವರ್ಗಕ್ಕೆ ಮಹತ್ವ ಕೊಡುತ್ತಿದ್ದೇವೆ. ಖಾದಿ ಮತ್ತು ಗ್ರಾಮೋದ್ಯೋಗದಿಂದ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿದೆ. ಹೀಗಾಗಿ ಬಜೆಟ್ ನಲ್ಲಿ ಖಾದಿ ಮತ್ತು ಗ್ರಾಮೋದ್ಯೋಗಕ್ಕೆ ವಿಶೇಷವಾದ ಒತ್ತು, ಹಣಕಾಸಿನ ನೆರವು ನೀಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನದ ಉದ್ಘಾಟಿಸಿ ಅವರು ಮಾತನಾಡಿದರು.
ಮಹಾತ್ಮ ಗಾಂಧೀಜಿಯವರು ಖಾದಿಗೆ ಬಹಳ ಮಹತ್ವ ಕೊಟ್ಟಿದ್ದರು. ಸ್ವರಾಜ್ಯದ ಪ್ರತೀಕಾರವಾಗಿ ವಿದೇಶಿ ವಸ್ತುಗಳನ್ನು ಬಹಿಷ್ಕಾರ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಸ್ವದೇಶಿ ವಸ್ತುಗಳ ಬಳಕೆ ಮಾಡುವ ವಿಚಾರದಲ್ಲಿ ಮೊಟ್ಟಮೊದಲ ಸ್ಪಂದಿಸಿ ಯಶಸ್ವಿಯಾಗಿ ಸಹಾಯ ಮಾಡಿದ್ದು ಖಾದಿ ಗ್ರಾಮೋದ್ಯೋಗಿಗಳು, ನೇಕಾರರು. ದೊಡ್ಡ ಪ್ರಮಾಣದಲ್ಲಿ ಬಟ್ಟೆ ಉತ್ಪಾದನೆ ಮಾಡಿ ದೇಶಕ್ಕೆ ಕೊಟ್ಟಿದ್ದರು. ಬೃಹತ್ ಪ್ರಮಾಣದ ಕಾರ್ಖಾನೆಯಿಂದ ಉತ್ಪಾದನೆ ಆಗಬಾರದು. ಬೃಹತ್ ಪ್ರಮಾಣದ ಜನಸಂಖ್ಯೆಯಿಂದ ಉತ್ಪಾದನೆಯಾಗಿ ಎಲ್ಲರಿಗೂ ಉದ್ಯೋಗ ಸಿಗಬೇಕು ಎಂದು ಮಹಾತ್ಮ ಗಾಂಧಿಜೀಯವರು ಹೇಳಿದ್ದರು. ಇವತ್ತಿಗೂ ಕೃಷಿಯ ನಂತರ ಅತಿಹೆಚ್ಚು ಉದ್ಯೋಗ ನೀಡುತ್ತಿರುವುದು ಖಾದಿ ಗ್ರಾಮೋದ್ಯೋಗ ಕ್ಷೇತ್ರ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಇವತ್ತು ತಂತ್ರಜ್ಞಾನ ಬದಲಾವಣೆ ಆಗಿದ್ದರಿಂದ ಖಾದಿಗೆ ಹಿನ್ನೆಡೆಯಾಗಿದೆ. ಪಾಲಿಸ್ಟರ್ ಬಟ್ಟೆಗಳ ಉಪಯೋಗ ಹೆಚ್ಚಾದಾಗ ಖಾದಿ ಉದ್ಯೋಗಕ್ಕೆ ಹೆಚ್ಚಿನ ತೊಂದರೆ ಆಗಿತ್ತು. ಆದರೆ ಈಗ ಸಾಕಷ್ಟು ಬದಲಾವಣೆಯಾಗಿದೆ. ಎತ್ನಿಕ್ ಉತ್ಪಾದನೆಗೆ ಹೆಚ್ಚು ಬೇಡಿಕೆ ಇದೆ.
ಖಾದಿ ಬಟ್ಟೆಗಳು, ಸಾವಯವ ಆಹಾರಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಅಮೆಜಾನ್ ಹಾಗೂ ಪ್ಲಿಪ್ ಕಾರ್ಟ್ ನಂತಹ ಸಂಸ್ಥೆಗಳು ಖಾದಿ ವಸ್ತುಗಳ ಖರೀದಿಗೆ ಆಸಕ್ತಿವಹಿಸಿವೆ. ನೇರವಾಗಿ ಉತ್ಪಾದಕರಿಂದ ಮಾರುಕಟ್ಟೆಗೆ ಕಳುಹಿಸುವ ವ್ಯವಸ್ಥೆ ಮಾಡುತ್ತಿದ್ದೇವೆ. ಆನ್ ಲೈನ್ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿದ್ದೇವೆ ಎಂದು ತಿಳಿಸಿದರು.
ಸ್ತ್ರೀ ಸಾಮರ್ಥ್ಯ ಯೋಜನೆ ಮೂಲಕ ಮಹಿಳೆಯರಿಗೆ 5 ಲಕ್ಷದ ವರೆಗೂ ಧನ ಸಹಾಯ ಮಾಡಿ ಮಹಿಳಾ ಸಂಘಗಳ ಮೂಲಕ ಉತ್ಪಾದನೆಗೆ ಆದ್ಯತೆ ನೀಡಿದ್ದೇವೆ. ಯುವಕರಿಗೆ ಸಂಘಗಳ ಮೂಲಕ ಸ್ವಯಂ ಉದ್ಯೋಗಕ್ಕೆ ಅವಕಾಶ ಕಲ್ಪಿಸಿದ್ದೇವೆ. ಖಾದಿ ಗ್ರಾಮೋದ್ಯೋಗ ಕಾಲಕ್ಕೆ ತಕ್ಕಂತೆ ಡಿಸೈನ್ ಮಾಡಿ ಉತ್ಪಾದನೆ ಮಾಡಬೇಕು.
ಈ ಬಾರಿ ಬಜೆಟ್ ನಲ್ಲಿ ದುಡಿಯುವ ವರ್ಗಕ್ಕೆ ಆದ್ಯತೆ ನೀಡಲಾಗುತ್ತಿದೆ. ಖಾದಿ ಗ್ರಾಮೋದ್ಯೋಗಕ್ಕೂ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ಖಾದಿಗೆ ಉತ್ತಮ ಭವಿಷ್ಯ ಇದೆ. ಯಾರು ಭಯ ಪಡಬೇಕಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಆರ್ಥಿಕ ಬಲ ಹೆಚ್ಚಳಕ್ಕೆ ಕ್ರಮ
ಖಾದಿ ಗ್ರಾಮೋದ್ಯೋಗ ಸಂಸ್ಥೆಯ ಆರ್ಥಿಕ ಬಲಕ್ಕೆ ಎಲ್ಲ ಕ್ರಮ ನಾನು ತೆಗೆದುಕೊಳ್ಳುತ್ತೇನೆ. ಬಾಕಿ ಇರುವ 74 ಕೋಟಿ ರೂಪಾಯಿಗೆ ಅನುಮೋದನೆ ಮತ್ತು ಬೇರೆ ಬೇರೆ ಕಡೆಯ ದೊಡ್ಡ ದೊಡ್ಡ ಆಸ್ತಿಯ ರಕ್ಷಣೆಗೆ 5 ಕೋಟಿ ರೂಪಾಯಿ ಕೊಡುವಂತೆ ಮನವಿ ಮಾಡಿದ್ದಿರಿ. ಅದಕ್ಕೆ ಸಂಬಂಧಿಸಿದ ಎಲ್ಲ ಕ್ರಮವನ್ನು ಕೈಗೊಳ್ಳುತ್ತೇನೆ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಛಲವಾದಿ ನಾರಾಯಣಸ್ವಾಮಿ, ಖಾದಿ ಮಂಡಳಿಯ ಅಧ್ಯಕ್ಷ ನಾಗರಾಜು ಅವರು ಸೇರಿದಂತೆ ಇತರರು ಉಪಸ್ಥಿತರಿದ್ದರು.