ನವದೆಹಲಿ, ಜ 27 ( DaijiworldNews/MS): ಕಳೆದ ವರ್ಷ ನಮೀಬಿಯಾದಿಂದ ತರಿಸಿದ್ದ ಚೀತಾಗಳು ಮಧ್ಯ ಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ವಿಹರಿಸುತ್ತಿರುವಂತೆಯೇ, ಇದೀಗ ದಕ್ಷಿಣ ಆಫ್ರಿಕಾದಿಂದ ಕ್ಕೆ 12 ಚೀತಾಗಳನ್ನು ಕರೆ ತರುವುದಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ಒಪ್ಪಂದ ಮಾಡಿಕೊಂಡಿದೆ.
ಫೆಬ್ರುವರಿ 12ರ ಮುಂಚಿತವಾಗಿ ಏಳು ಗಂಡು ಮತ್ತು ಐದು ಹೆಣ್ಣು ಚೀತಾಗಳನ್ನು ಮಧ್ಯ ಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಕರೆ ತರುವ ನಿರೀಕ್ಷೆಯಿದೆ ಎಂದು ಎಂದು ಕೇಂದ್ರ ಪರಿಸರ ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ.
ಭಾರತದಲ್ಲಿ ಚಿರತೆಗಳ ಸಂತತಿಯನ್ನು ಅಭಿವೃದ್ಧಿಗೊಳಿಸುವ ಸಲುವಾಗಿ ವಿವಿಧ ದೇಶಗಳಿಂದ ಚೀತಾಗಳನ್ನು ತರಿಸಿಕೊಳ್ಳುವ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಈ ಯೋಜನೆಯ ಮುಂದಿನ ಭಾಗವಾಗಿ ದಕ್ಷಿಣ ಆಫ್ರಿಕಾದಿಂದ ಬರುವ ಚೀತಾಗಳು, ಮಧ್ಯಪ್ರದೇಶದ ಕುನೋ ಉದ್ಯಾನವನದಲ್ಲಿನ ಚಿರತೆಗಳನ್ನು ಸೇರಿಕೊಳ್ಳಲಿವೆ.
ಕಳೆದ ಆರು ತಿಂಗಳಿಗೂ ಹೆಚ್ಚು ಸಮಯದಿಂದ ಕ್ವಾರಂಟೈನ್ನಲ್ಲಿರುವ ಚೀತಾಗಳು, ಇದೇ ತಿಂಗಳಲ್ಲಿ ಭಾರತಕ್ಕೆ ತಲುಪುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿತ್ತು. ಆದರೆ ದಕ್ಷಿಣ ಆಫ್ರಿಕಾದಲ್ಲಿ ಪ್ರಕ್ರಿಯೆ ವಿಳಂಬಗೊಂಡಿದ್ದರಿಂದ ಹಸ್ತಾಂತರ ವಿಳಂಬಗೊಂಡಿತು ಎಂದು ಹೇಳಿದ್ದಾರೆ. ಕಳೆದ ವರ್ಷ ಸೆ.17 ಮಧ್ಯ ಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನಕ್ಕೆ ನಮೀಬಿಯಾದಿಂದ ಎಂಟು ಚೀತಾಗಳನ್ನು ಕರೆತರಲಾಗಿತ್ತು.