ನವದೆಹಲಿ, ಜ 27 (DaijiworldNews/DB): ದುಬೈಯಿಂದ ಭಾರತಕ್ಕೆ ಬರುತ್ತಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ವಿಮಾನ ಹೈಜಾಕ್ ಆಗಿದೆ ಎಂದು ಟ್ವೀಟ್ ಮಾಡಿ ಬಂಧಿಸಲ್ಪಟ್ಟಿದ್ದಾನೆ.
ಮೋತಿ ಸಿಂಗ್ ರಾಥೋಡ್ ಎಂಬಾತ ಬಂಧಿಸಲ್ಪಟ್ಟ ವ್ಯಕ್ತಿ. ವಿಮಾನ ವಿಳಂಬವಾಗಿದ್ದಕ್ಕೆ ಅಸಮಾಧಾನಗೊಂಡಿದ್ದ ಈತ ಅಸಮಾಧಾನವನ್ನು ಹೊರ ಹಾಕುವ ಉದ್ದೇಶದಿಂದ ವಿಮಾನ ಹೈಜಾಕ್ ಆಗಿದೆ ಎಂದು ಟ್ವೀಟ್ ಮಾಡಿದ್ದ. ಈತ ದುಬೈಯಿಂದ ಜೈಪುರಕ್ಕೆ ಪ್ರಯಾಣ ಬೆಳೆಸಿದ್ದ. ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ವಿಮಾನ ದೆಹಲಿ ಕಡೆಗೆ ಹೊರಟಿತ್ತು. ಬಳಿಕ ತುಸು ವಿಳಂಬವಾಗಿ ಜೈಪುರಕ್ಕೆ ಹೊರಡಲು ವಿಮಾನ ತಯಾರಾಗುತ್ತಿದ್ದ ವೇಳೆ ವಿಮಾನ ಹೈಜಾಕ್ ಆಗಿದೆ ಎಂಬುದಾಗಿ ಈತ ಟ್ವೀಟ್ ಮಾಡಿದ್ದು, ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಟ್ಯಾಗ್ ಮಾಡಿದ್ದಾನೆ.
ಅಲ್ಲದೆ ಸಿಬಂದಿಯೊಂದಿಗೆ ಪ್ರಯಾಣಿಕರು ಗಲಾಟೆ ಮಾಡುತ್ತಿರುವ ವೀಡಿಯೋವನ್ನೂ ಈತ ಪೋಸ್ಟ್ ಮಾಡಿದ್ದಾನೆ. ಆ ಬಳಿಕ ಆತನಿಗೆ ತನ್ನ ತಪ್ಪಿನ ಅರಿವಾಗಿದ್ದು, ಇಂಗ್ಲಿಷ್ ಸರಿಯಾಗಿ ಬಾರದ ಕಾರಣ ತಪ್ಪು ಬರೆದು ಪೋಸ್ಟ್ ಮಾಡಿದ್ದೇನೆ ಎಂದು ಕ್ಷಮೆ ಯಾಚಿಸಿದ್ದಾನೆ. ಆದರೆ ತಪ್ಪು ಮಾಹಿತಿ ಹರಡಿದಕ್ಕಾಗಿ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.