ಗೋರಖ್ಪುರ, ಜ 27 (DaijiworldNews/DB): 78 ವರ್ಷದ ವ್ಯಕ್ತಿಯೊಬ್ಬ ತನ್ನ ಮಗನ ಪತ್ನಿಯನ್ನೇ ವಿವಾಹವಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. 28 ವರ್ಷದ ಸೊಸೆಯನ್ನು ವಿವಾಹವಾಗುವ ಮೂಲಕ ಈ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದ್ದಾರೆ.
ಬದಲ್ಗಂಜ್ ಕೊಟ್ವಾಲಿ ಪ್ರದೇಶದ ಛಪಿಯಾ ಉಮ್ರಾವ್ ಗ್ರಾಮದ ನಿವಾಸಿ ಕೈಲಾಶ್ ಯಾದವ್ ಎಂಬ 78 ವರ್ಷದ ವ್ಯಕ್ತಿಯೇ 28 ವರ್ಷದ ಸೊಸೆ ಪೂಜಾ ಎಂಬಾಕೆಯನ್ನು ವಿವಾಹವಾದವರು. ಇವರಿಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ.
12 ವರ್ಷಗಳ ಹಿಂದೆ ಕೈಲಾಶ್ ಯಾದವ್ ಅವರ ಪತ್ನಿ ನಿಧನರಾಗಿದ್ದರು. ಆ ಬಳಿಕ ಅವರ ನಾಲ್ಕು ಮಕ್ಕಳ ಪೈಕಿ ಮೂರನೇ ಮಗ ಅಂದರೆ ಪೂಜಾ ಅವರ ಪತಿ ಕೂಡಾ ನಿಧನ ಹೊಂದಿದ್ದರು. ಪತಿ ಮರಣಾನಂತರ ಪೂಜಾ ಒಬ್ಬಂಟಿಯಾಗಿದ್ದಳು ಎನ್ನಲಾಗಿದೆ. ಆದರೆ ಇನ್ನು ಕೆಲವರ ಪ್ರಕಾರ ಆಕೆ ಬೇರೊಬ್ಬನನ್ನು ಮದುವೆಯಾಗಿದ್ದು, ಆ ಕುಟುಂಬದಲ್ಲಿ ಇರಲು ಸಾಧ್ಯವಾಗದೆ ಮತ್ತೆ ತನ್ನ ಮೊದಲ ಪತಿಯ ಮನೆಗೆ ಹಿಂತಿರುಗಿ ಮಾವನನ್ನೇ ವರಿಸಲು ಒಪ್ಪಿಕೊಂಡಳು ಎಂದೂ ಹೇಳಲಾಗುತ್ತಿದೆ. ಸದ್ಯ ಮಾವ ಮತ್ತು ಸೊಸೆ ಮದುವೆಯಾಗಿದ್ದು, ಈ ಸಂಬಂಧದಿಂದ ಪೂಜಾ ಸಂತಸಗೊಂಡಿದ್ದಾಳೆ ಎಂದು ವರದಿಯಾಗಿದೆ.