ವಿಜಯಪುರ, ಜ 27 (DaijiworldNews/DB): ಹೈಕಮಾಂಡ್ ಹೇಳಿದ ಬಳಿಕ ನಾನು ಸಾಫ್ಟ್ ಆಗಬೇಕು. ಯಡಿಯೂರಪ್ಪ ಬಗ್ಗೆ ನನ್ನನಲ್ಲಿ ಏನೂ ಕೇಳಬೇಡಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದ ಬೆನ್ನಲ್ಲೇ ನಾನು ಮೌನ ವಹಿಸಿದ್ದೇನೆ. ಯಡಿಯೂರಪ್ಪ ಮೇಲೆ ನನಗೆ ಗೌರವವಿದೆ, ಅವರು ಹಿರಿಯರು. ಅವರ ಬಗ್ಗೆ ಮಾತನಾಡುವುದು ಬೇಡ ಎಂದು ನನಗೆ ಹೇಳಿರುವುದರಿಂದ ನಾನು ಮಾತನಾಡುವುದಿಲ್ಲ. ಅವರೇನು ನಮ್ಮ ಆಸ್ತಿಯನ್ನೂ ಕಬಳಿಸಿಲ್ಲ. ಮತ್ತೆ ನಾನು ಯಾಕೆ ಅವರ ಬಗ್ಗೆ ಮಾತನಾಡಲಿ ಎಂದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳಿಗೆ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ನೊಟೀಸ್ ಜಾರಿ ಮಾಡಿದೆ ಎಂಬ ವಿಚಾರವಾಗಿ ಕೆಲವರು ಪ್ರತಿಕ್ರಿಯಿಸುತ್ತಿದ್ದಾರೆ. ಆದರೆ ನನಗೆ ಯಾವುದೇ ನೋಟಿಸ್ ಬಂದಿಲ್ಲ. ಪಕ್ಷ ವಿರೋಧಿ ಹೇಳಿಕೆಯನ್ನು ನಾನು ನೀಡಿಲ್ಲ. ಭ್ರಷ್ಟರ ರಾಜಕೀಯದ ಬಗ್ಗೆಯಷ್ಟೇ ಮಾತನಾಡಿದ್ದೇನೆ ಎಂದು ಈ ಹಿಂದೆ ಅವರು ಹೇಳಿದ್ದರು.
ಅಲ್ಲದೆ, ನಾನು ಯಾವುದೇ ನೋಟಿಸ್ಗಳಿಗೆ ಅಂಜುವುದಿಲ್ಲ. ಬಿಜೆಪಿ ವರಿಷ್ಠರೇ ನನ್ನೊಂದಿಗೆ ಮಾತನಾಡಿದ್ದಾರೆ. ಎಲ್ಲಾ ಮಂತ್ರಿಗಳೂ ನನ್ನೊಂದಿಗೆ ಉತ್ತಮ ರೀತಿಯಲ್ಲಿದ್ದಾರೆ. ನಾನ್ಯಾವುದೇ ಮಂತ್ರಿಗಿರಿಯನ್ನು ಕೇಳಿಲ್ಲ. ಏಕೆಂದರೆ ಮಂತ್ರಿಗಳಿಗಿಂತಲೂ ನಾನೇ ಪವರ್ಫುಲ್ ಎಂದೂ ಯತ್ನಾಳ್ ಹೇಳಿಕೆ ನೀಡಿದ್ದರು.