ಚಾಮರಾಜನಗರ, ಜ 27 ( DaijiworldNews/MS): ಕೋವಿಡ್ ಸಮಯದಲ್ಲಿ ಚಾಮರಾಜನಗರದಲ್ಲಿ ಆಕ್ಸಿಜನ್ ನೀಡದೆ 36 ಜನರನ್ನ ಕೊಲೆ ಮಾಡಿದ್ದು, ಇದಕ್ಕೆ ಸಚಿವ ಕೆ. ಸುಧಾಕರ್ ಅವರೇ ನೇರ ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದರು.
ಪ್ರಜಾಧ್ವನಿ ಯಾತ್ರೆ ಭಾಗವಾಗಿ ಚಾಮರಾಜನಗರಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋವಿಡ್ ಪೀಡಿತರು ಮೃತಪಟ್ಟಿದ್ದಲ್ಲ, ಅದೊಂದು ವ್ಯವಸ್ಥಿತ ಕೊಲೆಯಾಗಿದೆ. ಮೊದಲು ಕೇವಲ 3 ಜನ ಮಾತ್ರ ಮೃತಪಟ್ಟಿದ್ದಾಗಿ ಹೇಳಿದ್ದುನಾವೆಲ್ಲ ಬಂದು ಮೃತರ ಕುಟುಂಬಸ್ಥರನ್ನ ಭೇಟಿಯಾಗಿ ಬಂದ ಬಳಿಕ 36 ಜನ ಸತ್ತಿರುವುದನ್ನ ಅಧಿಕಾರಿಗಳು ದೃಢಪಡಿಸಿದರು ಎಂದು ದೂರಿದರು.
ಸರ್ಕಾರದ ಯಾವ ಮಂತ್ರಿಯೂ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲಿಲ್ಲ. ಆಗಲೇ ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಇಲ್ಲ ಅಂತ ಗೊತ್ತಾಯಿತು. ನಾವು ಸಂತ್ರಸ್ತರ ಮನೆಗೆ ಹೋಗಿ 1 ಲಕ್ಷ ರೂಪಾಯಿ ಕೊಟ್ಟೆವು. ಈ ಬಾರಿ ನಮ್ಮ ಸರ್ಕಾರ ಬಂದರೆ ಕೋವಿಡ್ ನಿಂದ ಮೃತಪಟ್ಟ 36 ಕುಟುಂಬಗಳಲ್ಲಿ ತಲಾ ಒಬ್ಬರಿಗೆ ಸರ್ಕಾರಿ ಕೆಲಸ ನೀಡುತ್ತೇವೆ ಎಂಬ ಭರವಸೆ ನೀಡಿದ್ದೇವೆ ಎಂದು ಹೇಳಿದರು.
ಬಿಜೆಪಿ ನುಡಿದಂತೆ ನಡೆಯಲಿಲ್ಲ. ಆದರೂ ಮುಂಬರುವ ತಿಂಗಳು 17 ರಂದು ಬಜೆಟ್ ಮಂಡಿಸುತ್ತಿದ್ದಾರಂತೆ. ನೀವು ಕಳೆದ ಬಜೆಟ್ ನೋಡಿ ಶೇ. 50 ರಷ್ಟೂ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ. ಕಳೆದ ಚುನಾವಣೆ ಸಮಯದಲ್ಲಿ ಅವರು 600 ಭರವಸೆ ನೀಡಿ, 550 ಈಡಡೇರಿಸಿಲ್ಲ. ಆ ಮೂಲಕ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ. ಈ ಬಗ್ಗೆ ನಿತ್ಯ ಪ್ರಶ್ನೆ ಕೇಳುತ್ತಿದ್ದು ಒಂದಕ್ಕೂ ಉತ್ತರ ನೀಡಲು ಆಗಿಲ್ಲ. ಇದು ಬಿಜೆಪಿಯ ಸತ್ಯ ಎಂದು ಆರೋಪಿಸಿದರು.