ನವದೆಹಲಿ, ಜ 27 ( DaijiworldNews/MS): ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯದಲ್ಲಿ ನಂಬಿಕೆ ಇಡುವಂತೆ ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್ಗಳನ್ನು ಬುದ್ಧಿವಂತಿಕೆಯಿಂದ ಬಳಸಿಕೊಳ್ಳವಂತೆ ಹಾಗೂ ವಾರಕ್ಕೊಮ್ಮೆಯಾದರೂ "ಡಿಜಿಟಲ್ ಉಪವಾಸ" ವನ್ನು ಆಚರಿಸಲು ಪರೀಕ್ಷಾ ಪೇ ಚರ್ಚಾದ ಆರನೇ ಆವೃತ್ತಿಯ ಸಂದರ್ಭದಲ್ಲಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದರು.
ಭಾರತದಲ್ಲಿ ಜನರು ಸರಾಸರಿ ಆರು ಗಂಟೆಗಳ ಕಾಲ ಪರದೆಯ ಮೇಲೆ ಕಳೆಯುತ್ತಾರೆ. ಇದು ಕಳವಳಕಾರಿ ವಿಷಯ. ದೇವರು ನಮಗೆ ಅಪಾರ ಸಾಮರ್ಥ್ಯವಿರುವ ಬುದ್ದಿಮತ್ತೆಯನ್ನು ಕೊಟ್ಟಿರುವಾಗ ಗ್ಯಾಜೆಟ್ಗಳ ಗುಲಾಮರಾಗಿರುವುದು ಏಕೆ? ಸ್ಕ್ರೀನ್ ಸಮಯವು ನಿಜಕ್ಕೂ "ಅರ್ಥಹೀನವಾಗಿದೆ" ಅದು ತಯಾರಕರಿಗೆ ಮಾತ್ರ ಪ್ರಯೋಜನಕಾರಿಯಾಗಿದೆ ಎಂದು ಕಿವಿಮಾತು ವಿದ್ಯಾರ್ಥಿಗಳಿಗೆ ಹೇಳಿದರು
ಡಿಜಿಟಲ್ ಉಪವಾಸದಿಂದ ವಿದ್ಯಾರ್ಥಿಗಳನ್ನು ಕುಟುಂಬ ಸದಸ್ಯರೊಂದಿಗೆ ಬೆರೆಯಲು ಸಹಾಯ ಮಾಡುತ್ತದೆ. ನಾವು ಮನೆಯಲ್ಲಿ ಒಂದು ಸ್ಥಳವನ್ನು ತಂತ್ರಜ್ಞಾನ ನಿಷೇಧಿತ ವಲಯವಾಗಿ ಇರಿಸಬೇಕು. ನಿಮ್ಮ ಮನೆಯ ಆ ಜಾಗದಲ್ಲಿ ಯಾವುದೇ ತಾಂತ್ರಿಕ ಸಾಧನಗಳನ್ನು ಬಳಸಬೇಡಿ ಎಂದು ಸಲಹೆ ನೀಡಿದರು.
ನಾವು ಸ್ಮಾರ್ಟ್ ಫೋನ್ ಎಷ್ಟು ಬಳಸಬೇಕೆಂದು ಯೋಚಿಸಬೇಕು. ನಮ್ಮ ಅಗತ್ಯಕ್ಕೆ ಅನುಗುಣವಾಗಿ ಅದನ್ನು ಬುದ್ಧಿವಂತಿಕೆಯಿಂದ ಬಳಸಿಕೊಳ್ಳಬೇಕು. ಗ್ಯಾಜೆಟ್ಗಳ ದಾಸರಾಗದಂತೆ ವಿದ್ಯಾರ್ಥಿಗಳಿಗೆ ಪ್ರಧಾನಿ ಎಚ್ಚರಿಕೆ ನೀಡಿದರು. ನೀವು ಸ್ವತಂತ್ರ ವ್ಯಕ್ತಿ ಎಂದು ನೀವೇ ಹೇಳಿ, ತಂತ್ರಜ್ಞಾನವನ್ನು ಬಳಸಿಕೊಳ್ಳಿ, ಆದರೆ ಅದಕ್ಕೆ ಮಿತಿಯನ್ನು ಹಾಕಿಕೊಳ್ಳಿ ಎಂದರು.