ಉತ್ತರಪ್ರದೇಶ, ಜ 27 (DaijiworldNews/DB): ಹೆರಿಗೆ ಶಸ್ತ್ರಚಿಕಿತ್ಸೆ ವೇಳೆ ನಕಲಿ ವೈದ್ಯನೊಬ್ಬ ರಕ್ತನಾಳವನ್ನೇ ಕತ್ತರಿಸಿದ ಪರಿಣಾಮ ಮಹಿಳೆ ಮತ್ತು ಆಕೆಯ ನವಜಾತ ಶಿಶು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಮಾವಾನಾ ಪಟ್ಟಣದ ಪರೀಕ್ಷಿತ್ಗಢ ರಸ್ತೆಯಲ್ಲಿರುವ ರತನ್ ನರ್ಸಿಂಗ್ ಹೋಂನಲ್ಲಿ ನಡೆದಿದೆ.
ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಹಿಳೆ ನರ್ಸಿಂಗ್ ಹೋಂಗೆ ದಾಖಲಾಗಿದ್ದರು. ಈ ವೇಳೆ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ನಕಲಿ ವೈದ್ಯ ಮಹಿಳೆಯ ಒಂದು ರಕ್ತನಾಳವನ್ನು ಕತ್ತರಿಸಿದ್ದಾನೆ. ಇದರಿಂದ ಮಹಿಳೆಗೆ ತೀವ್ರ ರಕ್ತಸ್ರಾವವಾಗಿದ್ದು, ತಾಯಿ-ಮಗು ಇಬ್ಬರೂ ಮೃತಪಟ್ಟಿದ್ದಾರೆ.
ತಾಯಿ-ನವಜಾತ ಶಿಶುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಮೃತ ಮಹಿಳೆಯ ಕುಟುಂಬಿಕರು ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಇನ್ನು ಗಲಾಟೆ ವೇಲೆ ನರ್ಸಿಂಗ್ ಹೋಂ ಸಿಬಂದಿ ಮತ್ತು ವೈದ್ಯರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರನ್ನು ಮನವೊಲಿಸಿ ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮಾವಾನಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿದು ಬಂದಿದೆ.