ಕೊಪ್ಪಳ, ಜ 27 (DaijiworldNews/DB): ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರಿಗೆ ಅವಕಾಶ ಸದಾ ತೆರೆದ ಬಾಗಿಲಾಗಿರುತ್ತದೆ. ಅವರ ಕ್ಷೇತ್ರ ಆಯ್ಕೆಯ ಬಗ್ಗೆ ಇತರ ಪಕ್ಷದವರು ಮಾತನಾಡುವ ಅವಶ್ಯಕತೆ ಇಲ್ಲ ಎಂದು ಕಾಂಗ್ರೆಸ್ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಲ್ಲಿ ನಿಲ್ಲುತ್ತಾರೆ ಎಂಬ ಬಗ್ಗೆ ಈಗಲೇ ಅಂತಿಮಗೊಳಿಸುವ ಅಗತ್ಯವಿಲ್ಲ. ಅವರಿಗೆ ಹಲವು ಕ್ಷೇತ್ರಗಳಿಂದ ನಿಲ್ಲಲು ಬೇಡಿಕೆ ಬರುತ್ತಿದೆ. ಅವರಿಗೆ ಸ್ಪರ್ಧಿಸಲು ಕ್ಷೇತ್ರವಿಲ್ಲ ಎಂಬ ಪ್ರಚಾರ ಬೇರೆ ಪಕ್ಷಗಳ ತಂತ್ರ ಎಂದು ಕಿಡಿ ಕಾರಿದರು.
ಕೊಪ್ಪಳದಲ್ಲಿ ಸ್ಪರ್ಧಿಸುತ್ತಾರೆಂಬುದು ಕೇವಲ ವದಂತಿ. ಇದು ಸಿದ್ದರಾಮಯ್ಯ ಅವರ ಕೊನೆಯ ಚುನಾವಣೆ. ಹೀಗಾಗಿ ಮೈಸೂರಿನಲ್ಲಿಯೂ ಸ್ಪರ್ಧಿಸಲು ಜನ ಕೋರುತ್ತಿದ್ದಾರೆ. ಹಲವೆಡೆಯಿಂದ ಅವರನ್ನು ಸ್ಪರ್ಧಿಸುವಂತೆ ಜನ ಕೋರುತ್ತಿದ್ದಾರೆ. ಹೀಗಾಗಿ ಸ್ವಲ್ಪ ಗೊಂದಲ ಉಂಟಾಗಿದೆ ಎಂದರು.
ಕೋಲಾರದಲ್ಲಿ ಸಿದ್ದರಾಮಯ್ಯ ವಿರುದ್ದ ನಡೆಸುತ್ತಿರುವ ಪೋಸ್ಟರ್ ಅಭಿಯಾನ ಪ್ರತಿಪಕ್ಷದವರ ಕೆಲಸ. ಸಿದ್ದರಾಮಯ್ಯನವರನ್ನು ಸೋಲಿಸಬೇಕೆಂದು ಪ್ರತಿಪಕ್ಷದವರು ಟಾರ್ಗೆಟ್ ಮಾಡಿಕೊಂಡಿದ್ದಾರೆ. ಅದಕ್ಕೇ ಸಾಧ್ಯವಾದಷ್ಟು ತಂತ್ರಗಳನ್ನು ಹೂಡುತ್ತಿರುತ್ತಾರೆ ಎಂದು ಪ್ರತಿಕ್ರಿಯಿಸಿದರು.
ಸಿದ್ದರಾಮಯ್ಯನವರು ಎರಡು ಕ್ಷೇತ್ರದಲ್ಲಿ ನಿಲ್ಲಬೇಕೆಂಬ ದೇವಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮ್ಮ ಮನೆ ದೇವರು ಹೇಳಿದ್ದಲ್ಲ. ದೇವಿ ಹೇಳಿರುವುದಕ್ಕೂ, ನಾವು ತೆಗೆದುಕೊಳ್ಳುವ ನಿರ್ಧಾರಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.