ಮಂಡ್ಯ, ಜ 27 (DaijiworldNews/DB): ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವ ತಮ್ಮ ಕನಸನ್ನು ಮಂಡ್ಯದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಪರೋಕ್ಷವಾಗಿ ಹೇಳಿಕೊಂಡಿದ್ದಾರೆ. ಈ ನಿಮ್ಮ ಮಣ್ಣಿನ ಮಗನಿಗೆ ಅಧಿಕಾರದ ಶಕ್ತಿ ಕೊಡಿ ಎಂದು ಮನವಿ ಮಾಡಿದ್ದಾರೆ.
ಜನವರಿ 27ರ ಶುಕ್ರವಾರ ಮಂಡ್ಯದಲ್ಲಿ ನಡೆದ ಪ್ರಜಾಧ್ಚನಿ ಸಮಾವೇಶದಲ್ಲಿ ಮಾತನಾಡಿದ ಅವರು, ಜೆಡಿಎಸ್ಗೆ ನಾವು ಅಧಿಕಾರ ನೀಡಿದ್ದರೂ ಅವರು ಉಳಿಸಿಕೊಳ್ಳಲಿಲ್ಲ. ದೇವೇಗೌಡರನ್ನು ಸಿಎಂ, ಪ್ರಧಾನಿಯನ್ನಾಗಿ ಮಾಡಿದ್ದೇವೆ. ಇದೀಗ ಈ ಮಣ್ಣಿನ ಮಗನಾಗಿ, ಕನಕಪುರದ ಮಗನಾಗಿ, ಕೆಪಿಸಿಸಿ ಅಧ್ಯಕ್ಷನಾಗಿ ನಿಮ್ಮಲ್ಲಿ ನಾನು ಕೇಳಿಕೊಳ್ಳುತ್ತಿದ್ದೇನೆ. ಈ ನಿಮ್ಮ ಮಗನಿಗೆ ಅಧಿಕಾರದ ಶಕ್ತಿ ಕೊಡಿ ಎಂದರು.
ಮಂಡ್ಯಕ್ಕೂ ನನಗೂ ನಾಲ್ಕು ದಶಕಗಳ ಸಂಬಂಧ. ನನಗ ಮಂಡ್ಯ, ಕನಕಪುರ, ರಾಮನಗರ ಎಲ್ಲವೂ ಒಂದೇ. ಮಂಡ್ಯದ ಏಳು ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಿಸಿದ್ರಿ. ಅವರಿಗೆ ನಾವು ನೀಡಿದ ಅಧಿಕಾರವನ್ನು ಅವರು ಉಳಿಸಿಕೊಳ್ಳಲಿಲ್ಲ ಎಂದು ಕುಟುಕಿದರು.
ಬಿಜೆಪಿಯ ಭ್ರಷ್ಟ ಆಡಳಿತವನ್ನು ನೀವೆಲ್ಲರೂ ನೋಡಿದ್ದೀರಿ. ಆದರೆ ಕುಮಾರಸ್ವಾಮಿ ಈ ಭ್ರಷ್ಟಾಚಾರದ ವಿರುದ್ದ ಮಾತನಾಡಲಿಲ್ಲ. ನೀವು ಜೆಡಿಎಸ್ಗೆ ಮತ ನೀಡಿದರೆ ಬಿಜೆಪಿಯನ್ನು ಗೆಲ್ಲಿಸಿದಂತೆ. ನನ್ನ ಜೊತೆ ನೀವಿದ್ದರೆ ನನಗೆ ಶಕ್ತಿ. ರಾಜ್ಯವನ್ನು ಭ್ರಷ್ಟಾಚಾರಮುಕ್ತವಾಗಿಸುವುದೇ ನಮ್ಮ ಗುರಿ ಎಂದವರು ಪ್ರತಿಪಾದಿಸಿದರು.