ಬೆಂಗಳೂರು, ಜ 27 (DaijiworldNews/DB): ಬಿಜೆಪಿ ಸರ್ಕಾರ ಪತ್ರಿಕೆಗಳ ಜಾತಿ ಮೂಲ ಹುಡುಕಿ ಜಾಹೀರಾತು ನೀಡಲು ಹೊರಟಿದೆ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಕಿಡಿ ಕಾರಿದ್ದಾರೆ.
ಬ್ರಾಹ್ಮಣ ಸಮುದಾಯದವರ ಒಡೆತನದ ಪತ್ರಿಕೆಗಳಿಗೆ ಪ್ರತೀ ತಿಂಗಳು ಎರಡು ಪುಟಗಳ ಜಾಹೀರಾತು ಬಿಡುಗಡೆ ಮಾಡುವಂತೆ ವಾರ್ತಾ ಇಲಾಖೆ ಹೊರಡಿಸಿದೆ ಎನ್ನಲಾದ ಸುತ್ತೋಲೆ ವಿಚಾರವಾಗಿ ಶುಕ್ರವಾರ ಟ್ವೀಟ್ ಮಾಡಿರುವ ಅವರು, ಬಿಜೆಪಿ ಸರ್ಕಾರ ಪತ್ರಿಕೆಗಳ ಜಾತಿ ಮೂಲ ಹುಡುಕಿ ಜಾಹೀರಾತು ನೀಡಲು ಹೊರಟಿದೆ. ಪ್ರತಿ ತಿಂಗಳು 2 ಪುಟಗಳ ಸರ್ಕಾರದ ಜಾಹಿರಾತು ಬ್ರಾಹ್ಮಣರ ಮಾಲೀಕತ್ವದ ಪತ್ರಿಕೆಗಳಿಗೆ ಮಾತ್ರವಂತೆ! ಉಳಿದ ಜಾತಿಯವರದ್ದು ಪತ್ರಿಕೆಗಳಲ್ಲವೇ ಸಿಎಂ ಬೊಮ್ಮಾಯಿಯವರೇ ಎಂದು ಪ್ರಶ್ನಿಸಿದ್ದಾರೆ.
ನಾಗಪುರದ ಆದೇಶವನ್ನು ಚಾಚೂ ತಪ್ಪದೆ ಪಾಲಿಸುತ್ತಿರುವ ನಾಗಪುರದ ನಿಷ್ಠಾವಂತ ನೌಕರರಾಗಿದ್ದಾರೆ ಸಿಎಂ ಎಂದು ಇದೇ ವೇಳೆ ಅವರು ಲೇವಡಿ ಮಾಡಿದ್ದಾರೆ.
ರಾಜ್ಯ ವಾರ್ತಾ ಇಲಾಖೆಯು ಜನವರಿ 24ರ ಮಂಗಳವಾರ ಹೊರಡಿಸಿರುವ ಸುತ್ತೋಲೆಯಲ್ಲಿ ವಾರ್ತಾ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಬ್ರಾಹ್ಮಣ ಸಮುದಾಯದ ಒಡೆತನದ ಪತ್ರಿಕೆಗಳಿಗೆ ಪ್ರತೀ ತಿಂಗಳು ಎರಡು ಪುಟಗಳ ಜಾಹಿರಾತು ಬಿಡುಗಡೆ ಮಾಡಲು ಸರ್ಕಾರ ಮಂಜೂರಾತಿ ಆದೇಶ ಹೊರಡಿಸಲಾಗಿದೆ ಎಂದು ಉಲ್ಲೇಖಿಸಿದೆ. ಈ ಸಂಬಂಧ ಕಾಂಗ್ರೆಸ್ ನಾಯಕರು ಮಾತ್ರವಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿಯೂ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಮಾಧ್ಯಮ ಪಟ್ಟಿಯಲ್ಲಿರುವ ಬ್ರಾಹ್ಮಣ ಸಮುದಾಯದ ಒಡೆತನದ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಸರ್ಕಾರದ ಆದೇಶದಲ್ಲಿ ತಿಳಿಸಿರುವ ಪದ್ಧತಿಗೊಳಪಟ್ಟು ಜಾಹೀರಾತು ಬಿಟುಗಡೆ ಮಾಡಲು ತಮ್ಮ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಹಾಗೂ ನಾಲ್ಕು ಪುಟಗಳಲ್ಲಿ ಪ್ರಕಟವಾಗುತ್ತಿರುವ ಪತ್ರಿಕೆಗಳ ಸಂಪಾದಕರುಗಳಿಂದ ಕೆಳಕಂಡ ಮಾಹಿತಿಯನ್ನು ಕಡ್ಡಾಯವಾಗಿ ಪಡೆದುಕೊಂಡು ಏಳು ದಿವಸಗಳ ಒಳಗಾಗಿ ಕೇಂದ್ರ ಕಚೇರಿಗೆ ಸಲ್ಲಿಸಬೇಕು ಎಂದು ಇಲಾಖೆಯ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.