ಬೆಂಗಳೂರು, ಜ 28 ( DaijiworldNews/MS): ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಮೇ ತಿಂಗಳ ಮೊದಲ ಹಾಗೂ ಎರಡನೆ ವಾರದಲ್ಲಿ ನಡೆಯುವ ಎಲ್ಲ ಲಕ್ಷಣಗಳು ಗೋಚರಿಸಿವೆ.
ಹಾಲಿ ವಿಧಾನ ಸಭೆಯ ಅವಧಿ ಈ ವರ್ಷ ಮೇ 24 ಕ್ಕೆ ಕೊನೆಗೊಳ್ಳಲಿದೆ . ಹೊಸ ವಿಧಾನಸಭೆ ರಚನೆಯಾಗಬೇಕೆಂದರೆ ಅದಕ್ಕೆ ಒಂದು ವಾರದ ಮುನ್ನ ಚುನಾವಣಾ ಪ್ರಕ್ರಿಯೆಗಳು ಮುಗಿದಿರಬೇಕು. ವಿಧಾನಸಭೆ ಚುನಾವಣೆ ಪ್ರಕ್ರಿಯೆಗಳು ಮುಗಿಯಲು 45 ದಿನ ಅಗತ್ಯವಿದೆ. ಹೀಗಾಗಿ, ಮಾರ್ಚ್ ಎರಡನೇ ವಾರದ ನಂತರ ಯಾವ ದಿನವಾದರೂ ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ.
ಕಳೆದ ಬಾರಿ ಚುನಾವಣೆಯೂ ರಾಜ್ಯದಲ್ಲಿ ಮೇ ೧೨ ರಂದು ನಡೆದಿತ್ತು. ಹೆಚ್ಚು ಕಡಿಮೆ ಇದೇ ಅವಧಿಯಲ್ಲಿ ಈ ಬಾರಿ ಚುನಾವಣೆ ನಡೆಯಬಹುದು ಇದೇ ಆಧಾರದಲ್ಲಿ ಕೇಂದ್ರ ಚುನಾವಣೆ ಆಯೋಗ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಸಿದ್ಧತೆಯ ಬಗ್ಗೆ ಪರಿಶೀಲನೆ, ಸಭೆಗಳನ್ನು ನಡೆಸುತ್ತಿದೆ.
ಚುನಾವಣೆ ಪ್ರಕ್ರಿಯೆಗೆ ೩ ಲಕ್ಷ ಸಿಬ್ಬಂದಿ ಅಗ್ ಅತ್ಯವಿದ್ದು ಬಹುತೇಕ ಶಿಕ್ಷಕರು, ಉಪನ್ಯಾಸಕರನ್ನು ನಿಯೋಜಿಸಲಾಗುತ್ತದೆ. ಮಾ 9 ದಿಂದ 29ರವರೆಗೆ ದ್ವಿತೀಯ ಪಿಯುಸಿ, ಹಾಗೂ ಮಾ.31ರಿಂದ ಎ.15 ರವರೆಗೆ ಎಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದೆ ಹೀಗಾಗಿ ಇದರ ಬಳಿಕವೇ ಚುನಾವಣೆ ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.