ರಾಂಚಿ, ಜ 28 (DaijiworldNews/DB): ಖಾಸಗಿ ನರ್ಸಿಂಗ್ ಹೋಂವೊಂದರಲ್ಲಿ ಶನಿವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ವೈದ್ಯ ದಂಪತಿ ಸೇರಿದಂತೆ ಕನಿಷ್ಠ ಐವರು ಸಾವನ್ನಪ್ಪಿದ ಘಟನೆ ಜಾರ್ಖಂಡ್ನಲ್ಲಿ ಶನಿವಾರ ನಡೆದಿದೆ.
ಸಂಸ್ಥೆಯ ಮಾಲಕ ಡಾ. ವಿಕಾಸ್ ಹಜ್ರಾ, ಅವರ ಪತ್ನಿ ಡಾ. ಪ್ರೇಮಾ ಹಜ್ರಾ, ಮಾಲಕರ ಸೋದರಳಿಯ ಸೋಹನ್ ಖಮಾರಿ ಮತ್ತು ಮನೆಯ ಸಹಾಯಕಿ ತಾರಾದೇವಿ ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಮೃತಪಟ್ಟ ಇನ್ನೋರ್ವ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಜಾರ್ಖಂಡ್ನ ಧನ್ಬಾದ್ನ ಬ್ಯಾಂಕ್ ಮೋರ್ ಪ್ರದೇಶದಲ್ಲಿರುವ ಖಾಸಗಿ ನರ್ಸಿಂಗ್ ಹೋಂನ ಸ್ಟೋರ್ ರೂಮ್ನಲ್ಲಿ ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಘಟನೆ ಸಂಭವಿಸಿದೆ.
ಈ ನರ್ಸಿಂಗ್ ಹೋಂ ರಾಂಚಿಯಿಂದ ಸುಮಾರು 170 ಕಿ.ಮೀ ದೂರದಲ್ಲಿದೆ. ಬೆಂಕಿಯಿಂದಾಗಿ ದಟ್ಟ ಹೊಗೆ ಹರಡಿ ಉಸಿರುಗಟ್ಟಿದ ಕಾರಣ ಮಾಲಕರು, ಅವರ ಪತ್ನಿ ಸೇರಿದಂತೆ ಕನಿಷ್ಠ ಐವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಓರ್ವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿ ಹತ್ತಿಕೊಳ್ಳಲು ಕಾರಣ ತಿಳಿದು ಬಂದಿಲ್ಲ. ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ಧನ್ಬಾದ್ ಉಪವಿಭಾಗೀಯ ಮ್ಯಾಜಿಸ್ಟ್ರೇಟ್(ಎಸ್ಡಿಎಂ) ಪ್ರೇಮ್ ಕುಮಾರ್ ತಿವಾರಿ ತಿಳಿಸಿರುವುದಾಗಿ ವರದಿಯಾಗಿದೆ.