ಪಾಟ್ನಾ, ಜ 28 (DaijiworldNews/DB): ಕೇಂದ್ರ ಸಚಿವ ಅಶ್ವಿನಿ ಚೌಬೆ ಅವರ ಸಹೋದರ ನಿರ್ಮಲ್ ಚೌಬೆ ಹೃದಯಾಘಾತದಿಂದ ಶುಕ್ರವಾರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರ ಸಾವಿಗೆ ಆಸ್ಪತ್ರೆಯ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಿಕರು ಆರೋಪಿಸಿದ್ದಾರೆ.
ಭಾಗಲ್ಪುರ ನಗರದ ಆದಂಪುರ ನಿವಾಸಿ ನಿರ್ಮಲ್ ಚೌಬೆ ಮೃತಪಟ್ಟವರು. ಹೃದಯಾಘಾತಕ್ಕೊಳಗಾಗಿ ಗಂಭೀರ ಸ್ಥಿತಿಯಲ್ಲಿದ್ದ ನಿರ್ಮಲ್ ಚೌಬೆ ಅವರನ್ನು ಕೂಡಲೇ ಮನೆಯವರು ಭಾಗಲ್ಪುರದ ಮಾಯಾಗಂಜ್ ಆಸ್ಪತ್ರೆಗೆ ಕರೆದೊಯ್ದು ತೀವ್ರ ನಿಗಾ ಘಟಕದಲ್ಲಿ ದಾಖಲಿಸಿದ್ದಾರೆ. ಆದರೆ ಐಸಿಯುವಿನಲ್ಲಿ ವೈದ್ಯರೇ ಇಲ್ಲದ ಕಾರಣ ಅವರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಲಭ್ಯವಾಗಿಲ್ಲ ಹೀಗಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಕುಟುಂಬಿಕರು ಆರೋಪಿಸಿದ್ದಾರೆ.
ಆಸ್ಪತ್ರೆಯ ನಿರ್ಲಕ್ಷ್ಯದಿಂದ ನಿರ್ಮಲ್ ಚೌಬೆ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಸಂಬಂಧಿಕರು ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಥಳಕ್ಕಾಗಮಿಸಿದ ಡಿಎಸ್ಪಿ (ನಗರ) ಅಜಯ್ ಕುಮಾರ್ ಚೌಧರಿ ಅವರು ಸಂಬಂಧಿಕರನ್ನು ಸಮಾಧಾನಪಡಿಸಿದರು. ಬಳಿಕ ಇಬ್ಬರು ವೈದ್ಯರನ್ನು ಅಮಾನತು ಮಾಡಲಾಗಿದೆ.
ಇನ್ನು ಘಟನೆ ಬಗ್ಗೆ ಮಾತನಾಡಿದ ಆಸ್ಪತ್ರೆ ಅಧೀಕ್ಷಕ ಡಾ. ಕೆ.ಆರ್. ದಾಸ್ ಗಂಭೀರ ಸ್ಥಿತಿಯಲ್ಲಿ ರೋಗಿಯನ್ನು ಕರೆ ತರಲಾಗಿದೆ. ತೀವ್ರ ಹೃದಯಾಘಾತವಾಗಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಅವರಿಗೆ ಅಗತ್ಯ ಔಷಧವನ್ನು ಹಿರಿಯ ವೈದ್ಯರು ನೀಡಿ ಬಳಿಕ ಕೂಡಲೇ ಐಸಿಯುಗೆ ಸ್ಥಳಾಂತರಿಸಿದ್ದಾರೆ. ಆದರೆ ಐಸಿಯುವಿನಲ್ಲಿ ವೈದ್ಯರಿರದ ಕಾರಣ ಅಚಾತುರ್ಯ ಸಂಭವಿಸಿದೆ. ಘಟನೆ ಸಂಬಂಧ ಇಬ್ಬರು ವೈದ್ಯರನ್ನು ಅಮಾನತುಗೊಳಿಸಲಾಗಿದೆ ಎಂದಿದ್ದಾರೆ.