ಹುಬ್ಬಳ್ಳಿ, ಜ 28 (DaijiworldNews/DB): ಕರ್ನಾಟಕ ಕಾಂಗ್ರೆಸ್ ಒಡೆದ ಮನೆಯಾಗಿದೆ. ಆ ಪಕ್ಷ ಸುಳ್ಳು ಆಶ್ವಾಸನೆಗಳ ವ್ಯಾಪಾರಿಯಾಗಿದೆ. ಅವರ ಆಂತರಿಕ ಕಚ್ಚಾಟದಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನ ಗೆಲ್ಲಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಘೋಷಿಸಿರುವ ಉಚಿತ ವಿದ್ಯುತ್ ಭರವಸೆ ಸುಳ್ಳು. ಪಕ್ಷದೊಳಗಿನ ಗುಂಪುಗಾರಿಕೆ ಮರೆ ಮಾಚುವ ಉದ್ದೇಶದಿಂದ ಇಂತಹ ಸುಳ್ಳು ಆಶ್ವಾಸನೆಗಳನ್ನು ಹೊರಡಿಸುತ್ತಿದ್ದಾರೆ. 2018ರಲ್ಲಿ ಅಧಿಕಾರಕ್ಕೇರಿದಾಗ ಅವರ ಅಂದಿನ ಎಐಸಿಸಿ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ರೈತರ ಬೆಳೆ ಸಾಲ ಮನ್ನಾ ಭರವಸೆ ನೀಡಿದ್ದರು. ಆದರೆ ರಾಜಸ್ಥಾನದಲ್ಲಿ ಈವರೆಗೆ ಈ ಭರವಸೆ ಈಡೇರಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷ ಸುಳ್ಳು ಆಶ್ವಾಸನೆಗಳ ವ್ಯಾಪಾರಿ. ಯುವಕರಿಗೆ ಮಾಸಿಕ 3,500 ರೂ. ನಿರುದ್ಯೋಗ ಭತ್ಯೆ ನೀಡುವುದಾಗಿ ಘೋಷಿಸಿದ್ದ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಈ ಆಶ್ವಾಸನೆಯನ್ನು ಇನ್ನೂ ಈಡೇರಿಸಿಲ್ಲ. ಛತ್ತೀಸ್ಗಢ ಸರ್ಕಾರವೂ ನೀಡಿದ ಭರವಸೆ ಪೂರೈಸುವಲ್ಲಿ ವಿಫಲವಾಗಿದೆ ಎಂದು ಕಿಡಿ ಕಾರಿದರು.
ಚುನಾವಣೆಗೆ ಮುಂಚಿತವಾಗಿಯೇ , ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಲ್ಲಿ ಒಡಕು ಮೂಡಿದೆ. ಇಬ್ಬರ ಪ್ರತ್ಯೇಕ ಗುಂಪುಗಳು ರಚನೆಯಾಗಿದ್ದು, ತಮ್ಮ ತಮ್ಮ ನಾಯಕನಿಗೆ ಸಿಎಂ ಸ್ಥಾನಕ್ಕಾಗಿ ಆಗ್ರಹಿಸುತ್ತಿದ್ದಾರೆ. ರಾಜ್ಯದ ಜನರ ಅಭಿವೃದ್ದಿಯನ್ನು ಇವರು ಅದು ಹೇಗೆ ತಾನೇ ಖಚಿತಪಡಿಸುತ್ತಾರೆ? ಎಂದು ಪ್ರಶ್ನಿಸಿದರು.
ಇನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಬಸವರಾಜ ಬೊಮ್ಮಾಯಿಯವರ ಆಡಳಿತದ ಕಾರ್ಯವೈಖರಿಯಿಂದ ಕಾಂಗ್ರೆಸ್ ದಿಗಿಲುಗೊಂಡಿದೆ. ಪ್ರಸ್ತುತದ ಆರ್ಥಿಕ ಪರಿಸ್ಥಿತಿಯಲ್ಲಿ ಬಿಜೆಪಿ ಅತ್ಯುತ್ತವಾಗಿ ಕಾರ್ಯನಿರ್ವಹಣೆ ತೋರಿದೆ ಎಂದರು.